ದಾವಣಗೆರೆ: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಚ್ಚಾಟಿತ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್ ನಡುವೆ ನಡೆದಿದೆ ಎನ್ನಲಾದ ಆಡಿಯೋ ವೈರಲ್ ಪ್ರಕರಣ ರಾಜ್ಯ ಕಾಅಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಸಿದೆ. ದಾವಣಗೆರೆ ಉಪಚುನಾವಣೆ ವೇಳೆ ಜಮೀರ್ ಅಹ್ಮದ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು, ಅವರ ವಿರುದ್ಧ ಸ್ವಪಕ್ಷದವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜಮೀರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ನಾಯಕರಿಗೆ ಒತ್ತಾಯಿಸಿದ್ದಾರೆ.
ದಾವಣಗೆರೆ ಕಾಂಗ್ರೆಸ್ ಮುಖಂಡರು ಜಮೀರ್ ಅಹ್ಮದ್ ವಿರುದ್ಧ ಸಿಡಿದೆದ್ದಿದ್ದು, ಜಮೀರ್ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂದು ಪಕ್ಷದ ಹೈಕಮಾಂಡ್ಗೆ ಪತ್ರ ಬರೆದು ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೈಕಮಾಂಡ್ ಹಾಗೂ ರಾಜ್ಯ ನಾಯಕರಿಗೆ ದೂರು ನೀಡಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್ ಹಾಗೂ ಪಾಲಿಕೆ ಮಾಜಿ ಮೇಯರ್ ಕೆ. ಚಮನ್ ಸಾಬ್ ಹೈಕಮಾಂಡ್ಗೆ ಪತ್ರ ರವಾನಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಹುನ್ನಾರ ನಡೆಸಿದ್ದರು. ಉದ್ದೇಶ ಪೂರ್ವಕವಾಗಿ ಮುಸ್ಲಿಂ ಸಮಾಜದವರು ಮತದಾನದ ದಿನ ಮನೆ ಬಿಟ್ಟು ಹೊರಹೋಗದಂತೆ ನೋಡಿಕೊಳ್ಳುವಂತೆ ಹೇಳಿದ್ದಾರೆ. ಪಕ್ಷದ್ರೋಹಿಯಾದ ಜಮೀರ್ ಅಹ್ಮದ್ ಅವರನ್ನು ತಕ್ಷಣ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ಹಾಗೂ ಮೇಣುಗೋಪಾಲ್ ಅವರಿಗೆ ಪತ್ರ ಬರೆದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಜಮೀರ್ ಅಹ್ಮದ್ ಖಾನ್ ಹಾಗೂ ಮಹಮ್ಮದ್ ಸಿರಾಜ್ ಅವರು ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಆಡಿಯೋ ವೈರಲ್ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಿರಾಜ್ ಅವರು ದೂರು ದಾಖಲಿಸಿದ್ದಾರೆ. ವಿದ್ಯಾನಗರದಲ್ಲಿ ಇರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಮೊಹಮ್ಮದ್ ಸಿರಾಜ್ ಅವರು ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ದೂರು ನೀಡಿದರು.
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ವೇಳೆ ಜಮೀರ್ ಅಹ್ಮದ್, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ವಿರುದ್ಧ ಷಡ್ಯಂತ್ರ ನಡೆಸಿದ್ದರು ಎನ್ನಲಾಗಿದೆ. ಈ ಕುರಿತ ಆಡಿಯೋ ವೈರಲ್ ಆಗಿದೆ.
ಸರ್ಮಥ್ ಶಾಮನೂರು ಷಡ್ಯಂತ್ರ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ. ದೇವಿ ದುಗ್ಗಮ್ಮ ಷಡ್ಯಂತ್ರ ಮಾಡಲು ಬಿಡಲ್ಲ, ನಮ್ಮನ್ನು ಕಾಯುತ್ತಿದ್ದಾಳೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

