ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಮನೆಯಲ್ಲಿ 1.13 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಶಿವಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೈಯದ್ ಅಮೀರ್, ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಕಂಟೋನ್ಮೆಂಟ್ ಬಳಿ ಇರುವ ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ ಕಳೆದೊಂದು ವರ್ಷದಿಂದ ಹಂತ ಹಂತವಾಗಿ ಕಳ್ಳತನ ಮಾಡುತ್ತಿದ್ದರು. ಬರೋಬ್ಬರಿ 1.13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದಿದ್ದರು.
ಸಚಿವ ಜಮೀರ್ ಅಹಮ್ಮದ್ ಅವರ ತಾಯಿ ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ತನಿಖೆಯ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಟ್ರಾವೆಲ್ಸ್ ಬ್ಯುಸಿನೆಸ್ನಲ್ಲಿ ಲಾಸ್ ಆಗಿದ್ದಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳತನ ಮಾಡಿದ್ದ 1.13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದಿದ್ದ ಆರೋಪಿಗಳು ಆ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯಲು ಯೋಜನೆ ರೂಪಿಸಿದ್ದರು. ಕರೆ ಮಾಡಿದರೂ ಫೋನ್ ರಿಸೀವ್ ಮಾಡದಿದ್ದಾಗ ಇಬ್ಬರ ಮೇಲೆ ಅನುಮಾನ ವ್ಯಕ್ತವಾಗಿದ್ದು ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಹೆಡೆಮುರಿ ಕಟ್ಟಿದ್ದಾರೆ.

