ಕಾರು ಚಾಲಕನೊಬ್ಬ ‘ದೀದಿ’ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡ 23 ವರ್ಷದ ಯುವತಿಯೊಬ್ಬಳು ನಡುರಸ್ತೆಯಲ್ಲೇ ಕಾರಿಗೆ ಅಡ್ಡನಿಂತು ಗಂಟೆಗಟ್ಟಲೆ ಭಾರಿ ಹೈಡ್ರಾಮಾ ಸೃಷ್ಟಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಗರ್ಹಾ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ನಡೆದ ಈ ರಾದ್ಧಾಂತದಿಂದಾಗಿ ಹಬ್ಬದ ಸಂಜೆ ಸುಮಾರು ಒಂದು ಗಂಟೆ ಕಾಲ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.
ಘಟನೆಯ ವಿವರ: ಗುರುವಾರ ರಾತ್ರಿ ಜನನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದರ ಮುಂಭಾಗಕ್ಕೆ ಈಕೆ ಏಕಾಏಕಿ ನುಗ್ಗಿದ್ದಾಳೆ. ರಸ್ತೆಯಲ್ಲಿ ಭಾರಿ ಟ್ರಾಫಿಕ್ ದಟ್ಟಣೆ ಇದ್ದಿದ್ದರಿಂದ ಕಾರು ಚಾಲಕ ಆಕೆಗೆ ಪಕ್ಕಕ್ಕೆ ಸರಿಯುವಂತೆ ವಿನಂತಿಸಿದ್ದಾನೆ. ಈ ವೇಳೆ ಚಾಲಕ ಆಕೆಯನ್ನು “ದೀದಿ, ಸ್ವಲ್ಪ ಪಕ್ಕಕ್ಕೆ ಸರಿಯಿರಿ” ಎಂದು ಸಂಬೋಧಿಸಿದ್ದಾನೆ.
ಇದರಿಂದ ತೀವ್ರ ಕೆರಳಿದ ಯುವತಿ, “ನೀನ್ಯಾಕೆ ನನ್ನನ್ನು ದೀದಿ ಎಂದು ಕರೆಯುತ್ತಿದ್ದೀಯಾ? ನಾನು ನಿನ್ನ ಅಕ್ಕನಾ?” ಎಂದು ಜೋರಾಗಿ ಕೂಗಾಡಿ ವಾಗ್ವಾದಕ್ಕಿಳಿದಿದ್ದಾಳೆ. ಅಷ್ಟಕ್ಕೇ ನಿಲ್ಲದೆ, ಕಾರು ಮುಂದೆ ಹೋಗದಂತೆ ಬಾನೆಟ್ ಎದುರೇ ಠಿಕಾಣಿ ಹೂಡಿ ನಿಂತಿದ್ದಾಳೆ.
ಪೊಲೀಸ್ ಠಾಣೆ ಮುಂದೆಯೇ ಗಂಟೆಗಟ್ಟಲೆ ಟ್ರಾಫಿಕ್ ಜಾಮ್: ಹಬ್ಬದ ಸಮಯವಾಗಿದ್ದರಿಂದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಯುವತಿ ರಸ್ತೆಯ ಮಧ್ಯದಲ್ಲೇ ಮೊಂಡುತನದಿಂದ ನಿಂತಿದ್ದರಿಂದ ಇಡೀ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತವು. ಈ ಇಡೀ ಪ್ರಸಂಗ ಗರ್ಹಾ ಪೊಲೀಸ್ ಠಾಣೆಯ ನೇರ ಎದುರೇ ನಡೆದಿದ್ದರೂ, ಆರಂಭದಲ್ಲಿ ಪೊಲೀಸರಾಗಲಿ ಅಥವಾ ಟ್ರಾಫಿಕ್ ಸಿಬ್ಬಂದಿಯಾಗಲಿ ಮಧ್ಯಪ್ರವೇಶಿಸದೆ ಮೂಕಪ್ರೇಕ್ಷಕರಾಗಿದ್ದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಸ್ಥಳೀಯ ನಿವಾಸಿ ಗೋಲು ಜೈನ್ ಎಂಬುವವರು ಪೊಲೀಸ್ ಠಾಣಾಧಿಕಾರಿಗೆ ಮಾಹಿತಿ ನೀಡಿದ ನಂತರವಷ್ಟೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಆದರೆ, ಪೊಲೀಸರೂ ಆಕೆಯನ್ನು ಸಮಧಾನಪಡಿಸಲು ‘ದೀದಿ’ ಎಂದಾಗ, ಪೊಲೀಸರ ಮೇಲೂ ಹರಿಹಾಯ್ದ ಯುವತಿ ಅಸಭ್ಯ ಪದಗಳಿಂದ ನಿಂದಿಸಿ ಮತ್ತಷ್ಟು ರಾದ್ಧಾಂತ ಸೃಷ್ಟಿಸಿದ್ದಾಳೆ.
ಪೊಲೀಸರ ನಿಷ್ಕ್ರಿಯತೆಗೆ ಸಾರ್ವಜನಿಕರ ಆಕ್ರೋಶ: ಪ್ರತ್ಯಕ್ಷದರ್ಶಿಗಳ ಪ್ರಕಾರ, ಮೆಡಿಕಲ್ ಕಾಲೇಜು ಕಡೆಯಿಂದ ಬಂದಿದ್ದ ಆ ಯುವತಿ ಮಾನಸಿಕವಾಗಿ ತೀವ್ರ ಅಸ್ವಸ್ಥಳಾಗಿದ್ದಂತೆ ಕಂಡುಬಂದಿತ್ತು. ಆಕೆಯ ಮೈಮೇಲೆ ಗಾಯಗಳ ಗುರುತುಗಳೂ ಇದ್ದು, ಆಕೆಯ ಮೇಲೆ ಯಾವುದಾದರೂ ದೌರ್ಜನ್ಯ ನಡೆದಿರುವ ಅನುಮಾನವೂ ವ್ಯಕ್ತವಾಗಿದೆ. ಪೊಲೀಸರು ಆಕೆಗೆ ಸೂಕ್ತ ಸಾಂತ್ವನ ಅಥವಾ ವೈದ್ಯಕೀಯ ನೆರವು ನೀಡದೆ ಪರಿಸ್ಥಿತಿ ಕೈಮೀರಿ ಹೋಗುವಂತೆ ನೋಡಿಕೊಂಡರು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ ಕಾರು ಚಾಲಕ ಮಾತನಾಡಿ, “ಘಟನೆಯ ಬಗ್ಗೆ ಪೊಲೀಸರಿಗೆ ತಕ್ಷಣವೇ ದೂರು ನೀಡಿದರೂ ಅವರು ಯಾವುದೇ ತ್ವರಿತ ಕ್ರಮ ಕೈಗೊಳ್ಳಲಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರೆ, “ಲಿಖಿತ ದೂರು ಬಂದರೆ ಮಾತ್ರ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಗರ್ಹಾ ಠಾಣಾಧಿಕಾರಿ ಪ್ರಸನ್ನ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಸಣ್ಣ ಮಾತಿನ ಚಕಮಕಿ ರಸ್ತೆಯಲ್ಲಿ ಭಾರಿ ಅವಾಂತರಕ್ಕೆ ಕಾರಣವಾದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

