ಬೆಂಗಳೂರು: ಶಾರೀರಿಕ ಅನಾರೋಗ್ಯವನ್ನು ಮೌಖಿಕ ಮದ್ದುಗಳಿಂದ ಗುಣಪಡಿಸಬಹುದು, ಆದರೆ ಮಾನಸಿಕ ಅನಾರೋಗ್ಯವು ಅಷ್ಟು ಸುಲಭವಲ್ಲ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆಗಳು ಎಲ್ಲೆಡೆ ಹೆಚ್ಚಾಗುತ್ತಿದ್ದು, ಸರಿಯಾದ ಜಾಗೃತಿ ಇಲ್ಲದಿದ್ದರೆ ಇದು ಅಪಾಯಕಾರಿ ಹಂತ ತಲುಪಬಹುದು. ಭಾರತೀಯ ಮನೋವೈದ್ಯಕೀಯ ಸಂಘ (Indian Psychiatric Association) ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ನಿಜಕ್ಕೂ ದಂಗುಬಡಿಸುವಂತಿವೆ.
ಹೌದು, ‘ಮಾಲಿಕ್ಯೂಲರ್ ಸೈಕಿಯಾಟ್ರಿ’ (Molecular Psychiatry) ಜರ್ನಲ್’ನಲ್ಲಿ ಪ್ರಕಟವಾದ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಂಡುಬರುವ ಒಟ್ಟು ಮಾನಸಿಕ ಅಸ್ವಸ್ಥತೆಗಳಲ್ಲಿ ಶೇ. 60 ರಷ್ಟು ಪ್ರಕರಣಗಳು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿಯೇ ದಾಖಲಾಗುತ್ತಿವೆ.
ಪರಿಶೋಧನೆಯ ಪ್ರಕಾರ ರೋಗದ ಲಕ್ಷಣಗಳು ಪ್ರಾರಂಭವಾಗುವ ಹಂತಗಳು ಹೀಗಿವೆ:
• ಶೇ. 34.6: 14 ವರ್ಷದ ಒಳಗಿನವರಲ್ಲಿ.
• ಶೇ. 48.4: 18 ವರ್ಷದ ಒಳಗಿನವರಲ್ಲಿ.
• ಶೇ. 62.5: 25 ವರ್ಷದ ಒಳಗಿನವರಲ್ಲಿ.
ಅಂದರೆ, ಹೆಚ್ಚಿನವರಿಗೆ ಯುವಾವಸ್ಥೆಗೆ ಬರುವ ಮೊದಲೇ ಮಾನಸಿಕ ಸಮಸ್ಯೆಗಳು ಆರಂಭವಾಗುತ್ತಿದ್ದು, ವಯಸ್ಸಾದಂತೆ ಅವು ಗಂಭೀರ ಸ್ವರೂಪ ಪಡೆಯುತ್ತಿವೆ. ವಿಶೇಷವಾಗಿ ADHD (ಅಟೆನ್ಷನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್), ಆತಂಕ (Anxiety) ಮತ್ತು ಖಿನ್ನತೆ (Depression) ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ.
ಸಣ್ಣ ವಯಸ್ಸಿನಲ್ಲೇ ಮಾನಸಿಕ ಆರೋಗ್ಯ ಕ್ಷೀಣಿಸಲು ಕಾರಣಗಳೇನು?
ನಮ್ಮ ದೇಶದಲ್ಲಿ ಮಾನಸಿಕ ಕಾಯಿಲೆಗಳು ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅರಿವಿನ ಕೊರತೆ. ಕೌಮಾರ್ಯಾವಸ್ಥೆಯಲ್ಲಿ ಆರಂಭವಾಗುವ ಸಣ್ಣಪುಟ್ಟ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಜೀವನಪೂರ್ತಿ ವ್ಯಕ್ತಿಯನ್ನು ಕಾಡುತ್ತದೆ. ಇದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಇಡೀ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ.
ಮಾನಸಿಕ ಆರೋಗ್ಯ ಸುಧಾರಿಸಲು ತಜ್ಞರ ಸಲಹೆಗಳು:
ಮಾನಸಿಕ ಸಮಸ್ಯೆಗಳು ಉಲ್ಬಣಗೊಳ್ಳದಂತೆ ತಡೆಯಲು ಈ ಕೆಳಗಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ:
- ಶಿಸ್ತಿನ ನಿದ್ರೆ: ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ.
- ದೈಹಿಕ ಚಟುವಟಿಕೆ: ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ಮನಸ್ಸು ಪ್ರಫುಲ್ಲವಾಗಿರುತ್ತದೆ.
- ಡಿಜಿಟಲ್ ಡಿಟಾಕ್ಸ್: ಸೋಶಿಯಲ್ ಮೀಡಿಯಾ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ವಾಸ್ತವ ಜಗತ್ತಿನಲ್ಲಿ ಜನರೊಂದಿಗೆ ಬೆರೆಯಿರಿ.
- ಅರಿವು ಮೂಡಿಸಿ: ಮಾನಸಿಕ ಅಸ್ವಸ್ಥತೆಯನ್ನು ಕಳಂಕ ಎಂದು ಭಾವಿಸದೆ, ತಜ್ಞರ ಸಹಾಯ ಪಡೆಯಲು ಹಿಂಜರಿಯಬೇಡಿ.
ಮುಖ್ಯ ಸೂಚನೆ: ನಿಮ್ಮ ಮನೆಯಲ್ಲಿರುವ ಯುವಕ-ಯುವತಿಯರ ವರ್ತನೆಯಲ್ಲಿ ಸಣ್ಣ ಬದಲಾವಣೆ ಕಂಡರೂ ಅವರೊಂದಿಗೆ ಮುಕ್ತವಾಗಿ ಮಾತನಾಡಿ, ಬೆಂಬಲವಾಗಿ ನಿಲ್ಲಿ.

