ಚಾಮರಾಜನಗರ : ಚಿರತೆ ದಾಳಿಗೆ ಯುವಕ ಬಲಿಯಾದ ಹಿನ್ನೆಲೆ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
ಚಿರತೆ ದಾಳಿಗೆ ಯುವಕ ಬಲಿಯಾದ ಹಿನ್ನೆಲೆ ಮುಂದಿನ 4 ದಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟಕ್ಕೆ ಪಾದಯಾತ್ರೆಗೆ ಹೊರಟಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ್ದು, ಓರ್ವ ಯುವಕ ಬಲಿಯಾಗಿದ್ದಾನೆ. ಮೃತ ಯುವಕನನ್ನು ಮಂಡ್ಯ ತಾಲೂಕಿನ ನಿವಾಸಿ ಪ್ರವೀಣ್ ಎಂದು ಗುರುತಿಸಲಾಗಿದೆ.
ಚಿರತೆ ದಾಳಿ ಮಾಡಿ ಯುವಕನನ್ನು ಎಳೆದೊಯ್ದಿತ್ತು, ಅರಣ್ಯ ಇಲಾಖೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಚಿರತೆ ಪ್ರವೀಣ್ ಕುತ್ತಿಗೆ ಭಾಗವನ್ನ ತಿಂದು ಹೋಗಿದೆ ಎಂದು ಹೇಳಲಾಗಿದೆ. ಘಟನೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಆತಂಕ ಎದುರಾಗಿದೆ.

