ಬೆಂಗಳೂರು ನಗರದ 3 ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. 2024-25ನೇ ಸಾಲಿನಲ್ಲಿ ನಗರದ ಮೂರು ಆಸ್ಪತ್ರೆಗಳಿಗೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ಆರೋಗ್ಯ ಸೇವೆ ಪಡೆದಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಈ ಕುರಿತು ಮಾಹಿತಿ ನೀಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಕೆ.ಸಿ. ಜನರಲ್, ಸಂಜಯ್ ಗಾಂಧಿ ಹಾಗೂ ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ಈ 3 ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ನಾವು ಮಾಡುತ್ತಿರುವ ನಿರಂತರ ಪ್ರಯತ್ನಕ್ಕೆ ಇಂದು ಉತ್ತಮ ಫಲ ಸಿಗುತ್ತಿದೆ ಎಂದು ಹೇಳಿದ್ದಾರೆ.
2024-25ನೇ ಸಾಲಿನಲ್ಲಿ ಈ ಮೂರು ಆಸ್ಪತ್ರೆಗಳಿಗೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿ ಆರೋಗ್ಯ ಸೇವೆ ಪಡೆದಿದ್ದಾರೆ. ವಿಶೇಷವೆಂದರೆ, ರಾಜ್ಯದ ವಿವಿಧೆಡೆಯಿಂದ ಶೇ.60ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಪ್ರಗತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಪ್ರಮುಖ ಕಾಮಗಾರಿಗಳ ವಿವರವನ್ನು ಸಚಿವರು ನೀಡಿದ್ದಾರೆ.
ಕೆ.ಸಿ. ಜನರಲ್ ಆಸ್ಪತ್ರೆ, ಮಲ್ಲೇಶ್ವರಂ: ಹಲವು ದಶಕಗಳಿಂದ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಗಣನೀಯ ಸಾಧನೆ ಮಾಡಿರುವ ಈ ಆಸ್ಪತ್ರೆಯಲ್ಲಿ, 2025ನೇ ಸಾಲಿನಲ್ಲಿ 4,12,412 ಹೊರರೋಗಿಗಳು ಹಾಗೂ 21,000 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.
ಈ ಸೇವೆಯನ್ನು ವಿಸ್ತರಿಸಲು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಆಯವ್ಯಯದಲ್ಲಿ 130 ಕೋಟಿ ರೂ.ಗಳ ಅನುದಾನ ನೀಡಿ, ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದರು.
ಮೊದಲ ಹಂತದಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ (MCH) ಹಾಗೂ ಟ್ರಾಮಾ ಕೇರ್ ಸೆಂಟರ್ ಇದೇ ಸಾಲಿನಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.
ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ‘ಡೇ ಕೇರ್ ಕಿಮೋಥೆರಫಿ’ ಘಟಕ ತೆರೆಯಲು ನಿರ್ದೇಶನ ನೀಡಲಾಗಿದೆ. ಇಲ್ಲಿಯವರೆಗೆ 21,906 ಡಯಾಲಿಸಿಸ್ ಸೇಷನ್ಗಳು ಹಾಗೂ 2025ನೇ ಸಾಲಿನಲ್ಲಿ 2,474 ಹೆರಿಗೆಗಳು ಯಶಸ್ವಿಯಾಗಿ ನಡೆದಿವೆ.
ಸಂಜಯ್ ಗಾಂಧಿ ಆಸ್ಪತ್ರೆ: 2025ನೇ ಸಾಲಿನಲ್ಲಿ ಈ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ (OPD) 03 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ. 17,407 ಒಳರೋಗಿಗಳು ಚಿಕಿತ್ಸೆ ಪಡೆದಿದ್ದು, 4,400 ಹೆರಿಗೆಗಳು ಹಾಗೂ 4,892 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
ಸಿ.ವಿ. ರಾಮನ್ ನಗರ ಆಸ್ಪತ್ರೆ: ಇಲ್ಲಿ ಆರೋಗ್ಯ ಸೇವೆಯ ವಿಸ್ತರಣೆಗಾಗಿ ಈಗಾಗಲೇ 100 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ 2,84,895 ಹೊರರೋಗಿಗಳು ಹಾಗೂ 15,630 ಒಳರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ 2,814 ಹೆರಿಗೆಗಳು ನಡೆದಿವೆ. ಶೀಘ್ರದಲ್ಲೇ ಇಲ್ಲಿ ಹೊಸದಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಡ ಆರಂಭಗೊಳ್ಳಲಿದೆ.
ಮೇಲಿನ ಮೂರೂ ಆಸ್ಪತ್ರೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಮತ್ತು ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನ ಉತ್ತರ ಭಾಗಕ್ಕೂ ಹೊಸ ಕಾಯಕಲ್ಪ. ಬೆಂಗಳೂರಿನ ಉತ್ತರ ಭಾಗದಲ್ಲಿ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲು 150 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಆಸ್ಪತ್ರೆಗಳನ್ನು ನಿರ್ಮಿಸಲಾಗುತ್ತಿದೆ. ಬೆಳ್ಳಹಳ್ಳಿ (ಬ್ಯಾಟರಾಯನಪುರ): 05 ಎಕರೆ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಆಸ್ಪತ್ರೆ.
ಸಂಜಯನಗರ (ಹೆಬ್ಬಾಳ): ಸ್ಥಳೀಯರಿಗೆ ಅನುಕೂಲವಾಗುವಂತೆ ಮತ್ತೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ. ಇವು ತಲಾ 125 ಹಾಸಿಗೆಗಳ ಸಾಮರ್ಥ್ಯದ (ಒಟ್ಟು 250 ಬೆಡ್ಗಳು) ಈ ಎರಡು ಆಸ್ಪತ್ರೆಗಳಲ್ಲಿ ದಿನದ 24 ಗಂಟೆಯೂ (24×7) ನಿರಂತರ ವೈದ್ಯಕೀಯ ಸೇವೆ ಲಭ್ಯವಿರಲಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಸುಲಭವಾಗಿ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ. ಸಾರ್ವಜನಿಕರು ಈ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಕೋರುತ್ತೇನೆ.

