ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಕುಂಬ್ರಿಗದ್ದೆಯಲ್ಲಿ ಬೈಕ್ ಅಪಘಾತದಲ್ಲಿ ಪುತ್ರ ಮೃತಪಟ್ಟ ಸುದ್ದಿ ತಿಳಿದು ತಂದೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ.
ವರದರಾಜ್(40) ತೀರ್ಥಹಳ್ಳಿಯ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ತಡರಾತ್ರಿ ಬೈಕ್ ನಲ್ಲಿ ಮನೆಗೆ ಬರುತ್ತಿದ್ದಾಗ ಕಾನುಗೋಡು ಸಮೀಪ ರಸ್ತೆ ಮಧ್ಯ ನಿಂತಿದ್ದ ಜಾನುವಾರುಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಬೈಕ್ ಪಲ್ಟಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಮನೆಯಲ್ಲಿದ್ದ ಮೃತನ ತಂದೆ ಮಂಜಪ್ಪ(65) ಪುತ್ರ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತಿಳಿದು ಅಘಾತಕ್ಕೆ ಒಳಗಾಗಿದ್ದಾರೆ. ಕ್ರಿಮಿನಾಶಕ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಮಂಜಪ್ಪ ಅವರಿಗೆ ಪತ್ನಿ, ಮತ್ತೊಬ್ಬ ಪುತ್ರ ಇದ್ದಾರೆ. ತಂದೆ ಹಾಗೂ ಮಗ ಒಂದೇ ದಿನ ಮೃತಪಟ್ಟಿದ್ದು ಬಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

