ಆಂಧ್ರ ಪ್ರದೇಶ/ ಟಂಗುತೂರು : ಎಂಟು ವರ್ಷಗಳ ಕಾಲ ಮುಂದುವರಿದಿದ್ದ ಪ್ರೇಮ ಸಂಬಂಧ ದುರಂತ ಅಂತ್ಯ ಕಂಡಿದೆ. ಪ್ರೀತಿಸಿದ್ದ ಯುವಕ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಮೃತದೇಹವನ್ನು ಯುವಕನ ಮನೆ ಮುಂದೆ ತಂದು ಪ್ರತಿಭಟನೆ ನಡೆಸಿದ ಯುವತಿಯ ಕುಟುಂಬಸ್ಥರು, ತಮ್ಮ ಮಗಳ ಸಾವಿಗೆ ಆತನೇ ಕಾರಣ ಎಂದು ಆರೋಪಿಸಿ, “ಮೃತದೇಹಕ್ಕಾದರೂ ತಾಳಿ ಕಟ್ಟಬೇಕು” ಎಂದು ಒತ್ತಾಯಿಸಿದರು. ಆತ ತಾಳಿ ಕಟ್ಟಿದ ಬಳಿಕವೇ ಅಂತ್ಯಕ್ರಿಯೆ ನಡೆಸಬೇಕು ಎಂದು ಪಟ್ಟು ಹಿಡಿದ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಟಂಗುತೂರು ಮಂಡಲದಲ್ಲಿ ನಡೆದಿದೆ.
ಪ್ರಕಾಶಂ ಜಿಲ್ಲೆಯ ಪ್ರತ್ತಿಪಾಡು ಮಂಡಲದ ಕೊಂಡ್ರುಪಾಡು ಗ್ರಾಮದ ಅಡ್ಡಗಲ್ಲ ಕೀರ್ತಿ (24) ಮುಂಬೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎಂಟು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಟಂಗುತೂರು ಮಂಡಲದ ಪೊಂದೂರು ಗ್ರಾಮದ ಪಾಪಿನೇನಿ ಸಾಯಿ ಅವರೊಂದಿಗೆ ಪರಿಚಯವಾಗಿದ್ದು, ಬಳಿಕ ಅದು ಪ್ರೀತಿಗೆ ತಿರುಗಿತ್ತು. ಪ್ರಸ್ತುತ ಸಾಯಿ ಕತಾರ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಉದ್ಯೋಗದ ಕಾರಣದಿಂದ ಇಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಇದ್ದರೂ ಆಗಾಗ ಭೇಟಿ ಮಾಡುತ್ತಿದ್ದರು.
ಇತ್ತೀಚೆಗೆ ಸಾಯಿಯ ಕುಟುಂಬಸ್ಥರು ಆತನಿಗೆ ಮತ್ತೊಬ್ಬ ಯುವತಿಯೊಂದಿಗೆ ವಿವಾಹ ನಿಶ್ಚಯಿಸಿರುವ ವಿಚಾರ ಕೀರ್ತಿಗೆ ತಿಳಿದುಬಂದಿತು. ಇದರಿಂದ ಮನನೊಂದ ಕೀರ್ತಿ ತನ್ನನ್ನೇ ಮದುವೆಯಾಗುವಂತೆ ಸಾಯಿಯನ್ನು ಕೇಳಿದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಬಳಿಕ ಕೀರ್ತಿ ಈ ವಿಷಯವನ್ನು ತನ್ನ ತಂದೆ-ತಾಯಿಗೆ ತಿಳಿಸಿದ್ದಳು. ಅವರು ಸಾಯಿಯ ಕುಟುಂಬದವರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಒಂಗೋಲಿನಲ್ಲಿರುವ ಸಾಯಿಯ ಸಂಬಂಧಿಕರ ಮನೆಯಲ್ಲಿ ಎರಡೂ ಕುಟುಂಬಗಳ ನಡುವೆ ಚರ್ಚೆಗಳು ನಡೆದರೂ, ಸಾಯಿ ಮದುವೆಗೆ ಒಪ್ಪದ ಕಾರಣ ಕೀರ್ತಿಯನ್ನು ಸಮಾಧಾನಪಡಿಸಿ ಮತ್ತೆ ಮುಂಬೈಗೆ ಕಳುಹಿಸಲಾಯಿತು.
ಈ ಬೆಳವಣಿಗೆಯಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾದ ಕೀರ್ತಿ ಜುಲೈ 14ರಂದು ತನ್ನ ಪೋಷಕರಿಗೆ ಕಾನ್ಫರೆನ್ಸ್ ಕಾಲ್ ಮಾಡಿದ್ದಳು. ಆ ಕರೆಯಲ್ಲಿ ಸಾಯಿ ಕೂಡ ಇದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ. ತನ್ನ ಸಾವಿಗೆ ಸಾಯಿಯೇ ಕಾರಣ ಎಂದು ಹೇಳಿದ ಕೀರ್ತಿ, ತಾನು ವಾಸಿಸುತ್ತಿದ್ದ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಳು.
ಕುಟುಂಬಸ್ಥರು ಹಾಗೂ ಸಾಯಿ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದರು. ಕೊಠಡಿ ತೆರೆದು ನೋಡಿದಾಗ ಕೀರ್ತಿ ಮೃತಪಟ್ಟಿರುವುದು ಬೆಳಕಿಗೆ ಬಂತು. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಈ ನಡುವೆ ಸಾಯಿ ಕತಾರ್‌ಗೆ ತೆರಳಿರುವ ಮಾಹಿತಿ ದೊರಕಿತು. ಇದರಿಂದ ಕೀರ್ತಿಯ ಕುಟುಂಬಸ್ಥರು ಮೃತದೇಹವನ್ನು ನೇರವಾಗಿ ಪೊಂದೂರಿನಲ್ಲಿರುವ ಸಾಯಿಯ ಮನೆಗೆ ತಂದರು. “ಸಾಯಿಯ ಮೋಸದಿಂದಲೇ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಕೊನೆಯ ಆಸೆಯಂತೆ ಸಾಯಿಯೇ ಮೃತದೇಹಕ್ಕೆ ತಾಳಿ ಕಟ್ಟಬೇಕು ಹಾಗೂ ಅಂತ್ಯಕ್ರಿಯೆ ನೆರವೇರಿಸಬೇಕು” ಎಂದು ಅವರು ಆಗ್ರಹಿಸಿದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡೂ ಕುಟುಂಬಗಳು ಹಾಗೂ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸಾಯಿ ಕತಾರ್‌ನಿಂದ ಬರಲು ಸಮಯ ಬೇಕಾಗುವುದರಿಂದ, ಅವರ ಕುಟುಂಬವೇ ಅಂತ್ಯಕ್ರಿಯೆ ನಡೆಸುವುದಾಗಿ ಸಂಬಂಧಿಕರು ತಿಳಿಸಿದರು. ದೀರ್ಘ ಚರ್ಚೆಯ ಬಳಿಕ ಮೃತ ಯುವತಿಯ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಪೊಂದೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

