ಕನಸಿನ ಮನೆ ಖರೀದಿಸುವುದು ಪ್ರತಿಯೊಬ್ಬರ ಜೀವನದ ಬಹುದೊಡ್ಡ ಗುರಿ. ಅನೇಕರು ಈ ಗುರಿ ತಲುಪಲು ನಿವೃತ್ತಿಯ ವಯಸ್ಸಿನವರೆಗೆ ಕಾಯುತ್ತಾರೆ. ಆದರೆ ಸಿಂಗಾಪುರದ 26 ವರ್ಷದ ಯುವತಿ ಕ್ರಿಸ್, ತಮ್ಮ 27ನೇ ಹುಟ್ಟುಹಬ್ಬಕ್ಕೂ ಮುನ್ನವೇ ಅಂದಾಜು 7 ಕೋಟಿ ರೂಪಾಯಿ (S$1 million) ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕುಟುಂಬದ ಸಹಾಯವಿಲ್ಲದೆ ಸಾಧನೆ ಸೋಶಿಯಲ್ ಮೀಡಿಯಾದಲ್ಲಿ ತನ್ನ ಸಾಧನೆಯನ್ನು ಹಂಚಿಕೊಂಡಿರುವ ಕ್ರಿಸ್, ಈ ಮನೆ ಖರೀದಿಸಲು ತನ್ನ ಕುಟುಂಬದಿಂದ ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ, ತಾವು ಮನೆ ಖರೀದಿಸುತ್ತಿರುವ ವಿಷಯವನ್ನು ಅವರು ಪೋಷಕರಿಗೂ ತಿಳಿಸಿರಲಿಲ್ಲ. ಮನೆಯ ಕೀ ಕೈಗೆ ಬಂದ ದಿನವಷ್ಟೇ ಪೋಷಕರಿಗೆ ಈ ಸರ್ಪ್ರೈಸ್ ನೀಡಿದ್ದಾರೆ. ಸಿಂಗಾಪುರದಲ್ಲಿ ಕಂಟೆಂಟ್ ಕ್ರಿಯೇಟರ್ ಮತ್ತು ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ಇವರು, ಚಿಕ್ಕ ವಯಸ್ಸಿನಲ್ಲೇ ಆಸ್ತಿ ಹೊಂದಬೇಕು ಎಂಬ ಛಲ ಹೊಂದಿದ್ದರು.
ದಿನಕ್ಕೆ 18 ಗಂಟೆಗಳ ಕಾಲ ದುಡಿಮೆ ಈ ಯಶಸ್ಸಿನ ಹಿಂದೆ ವರ್ಷಗಳ ಕಾಲದ ಕಠಿಣ ಪರಿಶ್ರಮವಿದೆ. ಕ್ರಿಸ್ ಪ್ರಸ್ತುತ ಪೂರ್ಣಾವಧಿಯ ಉದ್ಯೋಗದ ಜೊತೆಗೆ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಕ್ಷೇತ್ರದಲ್ಲಿ ಫ್ರೀಲಾನ್ಸ್ ಕೆಲಸವನ್ನೂ ಮಾಡುತ್ತಾರೆ. ವಾರದ ಏಳೂ ದಿನಗಳ ಕಾಲ ದಿನಕ್ಕೆ 12 ರಿಂದ 18 ಗಂಟೆಗಳ ಕಾಲ ಅವರು ಕೆಲಸ ಮಾಡುತ್ತಾರೆ. “ನಾನು ಜಿಮ್‌ನಲ್ಲಿ ವರ್ಕೌಟ್ ಮಾಡುವಾಗಲೂ ಕೆಲಸ ಮಾಡುತ್ತಿರುತ್ತೇನೆ” ಎಂದು ಅವರು ತಮ್ಮ ಕೆಲಸದ ಬದ್ಧತೆಯ ಬಗ್ಗೆ ಹೇಳಿಕೊಂಡಿದ್ದಾರೆ.
ಉಳಿತಾಯ ಮತ್ತು ಹೂಡಿಕೆಯೇ ಮಂತ್ರ ಕೇವಲ 14ನೇ ವಯಸ್ಸಿನಿಂದಲೇ ಸಣ್ಣಪುಟ್ಟ ಕೆಲಸಗಳನ್ನು ಆರಂಭಿಸಿದ್ದ ಕ್ರಿಸ್, 19ನೇ ವಯಸ್ಸಿನಿಂದಲೇ ಹಣ ಹೂಡಿಕೆ ಮಾಡಲು ಶುರು ಮಾಡಿದ್ದರು. ಅತಿಯಾದ ಖರ್ಚು ಮಾಡದೆ, ಕೇವಲ 3 ಡಾಲರ್ (ಸುಮಾರು 200-250 ರೂಪಾಯಿ) ಬಜೆಟ್ ಊಟ ಸವಿಯುವ ಮೂಲಕ ಹಣ ಉಳಿಸುತ್ತಿದ್ದರು. “ನನ್ನ ತಾಯಿ ನನಗೆ ಮೊದಲಿನಿಂದಲೂ ಸ್ವಾವಲಂಬಿಯಾಗುವುದನ್ನು ಕಲಿಸಿದ್ದರು. ಸಿಂಗಾಪುರದಂತಹ ದೇಶದಲ್ಲಿ ಸ್ವಂತ ಆಸ್ತಿ ಹೊಂದಿರುವುದು ಸುರಕ್ಷತೆಯ ಭಾವನೆ ನೀಡುತ್ತದೆ” ಎಂದು ಅವರು ತಿಳಿಸಿದ್ದಾರೆ.
ಆಧುನಿಕ ಜಗತ್ತಿನ ಯುವಜನತೆಗೆ ಕ್ರಿಸ್ ಅವರ ಈ ಕಥೆ ಒಂದು ದೊಡ್ಡ ಸ್ಪೂರ್ತಿಯಾಗಿದೆ. ಅತೀ ಕಡಿಮೆ ವಯಸ್ಸಿನಲ್ಲಿ ಹೂಡಿಕೆ ಮತ್ತು ಕಠಿಣ ಪರಿಶ್ರಮದ ಮೂಲಕ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈಕೆ ಸಾಕ್ಷಿಯಾಗಿದ್ದಾರೆ.

