ಬೆಂಗಳೂರು: ಯುವತಿಯೊಬ್ಬಳು ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿಯನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಬೆಂಗಳೂರಿನ ಎನ್ ಆರ್ ಐ ಲೇಔಟ್ ನಲ್ಲಿ ನಡೆದಿದೆ.
16 ವರ್ಷದ ಯುವತಿ ಏಕಾಏಕಿ ಅಪಾರ್ಟ್ ಮೆಂಟ್ ನ 5ನೇ ಮಹಡಿಗೆ ತೆರಳಿ ಅಲ್ಲಿಂದ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಕೆಳಗೆ ಜಿಗಿಯಲು ಯತ್ನಿಸಿದ್ದಾಳೆ. ಇದನ್ನು ಕಂಡ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಪಾರ್ಟ್ ಮೆಂಟ್ ಮೇಲೆ ತೆರಳಿ, ಯುವತಿ ಇದ್ದ ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕವಾಗಿ ಮನನೊಂದು ಯುವತಿ ಇಂತಹ ನಿರ್ಧಾರ ಕೈಗೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆಕೆ ಅಸ್ವಸ್ಥಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

