ತಂಬಾಕು ಸೇವನೆ ಕೇವಲ ಆರೋಗ್ಯವನ್ನು ಮಾತ್ರವಲ್ಲ, ನಿಮ್ಮ ಆರ್ಥಿಕ ಸ್ಥಿತಿಯನ್ನೂ ಕುಸಿಯುವಂತೆ ಮಾಡುತ್ತಿದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಭಾರತದ ಸುಮಾರು 1.5 ಕೋಟಿ ಕುಟುಂಬಗಳು ಕೇವಲ ತಂಬಾಕು ಅಭ್ಯಾಸವನ್ನು ಬಿಡುವುದರ ಮೂಲಕ ಬಡತನದಿಂದ ಹೊರಬಂದು ಶ್ರೀಮಂತರಾಗಬಹುದು. ಸಿಗರೇಟು, ಬೀಡಿ ಮತ್ತು ಗುಟ್ಕಾಗಳಿಗೆ ವ್ಯಯಿಸುವ ಹಣವನ್ನು ಉಳಿತಾಯ ಮಾಡಿದರೆ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೋಟ್ಯಧಿಪತಿಯಾಗುವ ಅವಕಾಶವಿದೆ ಎಂದು ಈ ವರದಿ ಸಂಚಲನ ಮೂಡಿಸಿದೆ.
ಹೌದು, ತಂಬಾಕು ಉತ್ಪನ್ನಗಳ ಮೇಲೆ ಮಾಡುವ ಖರ್ಚು ಮತ್ತು ಅದರಿಂದ ಬರುವ ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು ಉಳಿಸಿದರೆ ಕೋಟ್ಯಂತರ ಭಾರತೀಯ ಕುಟುಂಬಗಳ ತಲೆಬರಹವೇ ಬದಲಾಗಲಿದೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ. ಅಭಿವೃದ್ಧಿಗೆ ಅಡ್ಡಿಯಾಗಿರುವ ಈ ವ್ಯಸನದಿಂದ ದೂರವಾದರೆ ಆರ್ಥಿಕವಾಗಿ ಬಲಿಷ್ಠರಾಗುವುದು ಹೇಗೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಭಾರತೀಯ ಕುಟುಂಬಗಳು ಕೇವಲ ತಂಬಾಕು ಸೇವನೆಯನ್ನು ಬಿಡುವುದರಿಂದ ಕೋಟ್ಯಧಿಪತಿಗಳಾಗಬಹುದು ಎಂದರೆ ಕೇಳಲು ವಿಚಿತ್ರ ಎನಿಸಬಹುದು. ಆದರೆ, ಭಾರತೀಯರ ತಂಬಾಕು ಅಭ್ಯಾಸಗಳ ಕುರಿತು ಇತ್ತೀಚೆಗೆ ನಡೆದ ಅಧ್ಯಯನವೊಂದು ಈ ಸಂಚಲನಕಾರಿ ವಿಷಯವನ್ನು ಬಹಿರಂಗಪಡಿಸಿದೆ.
ಆರ್ಥಿಕ ಬಿಕ್ಕಟ್ಟು : ಭಾರತದಲ್ಲಿ ತಂಬಾಕು ಬಳಕೆ ಕೇವಲ ಆರೋಗ್ಯದ ಸಮಸ್ಯೆಯಲ್ಲ, ಅದು ದೊಡ್ಡ ಆರ್ಥಿಕ ಬಿಕ್ಕಟ್ಟು ಕೂಡ ಹೌದು. ದೇಶದ ಸುಮಾರು ಶೇ. 10ರಷ್ಟು ಕುಟುಂಬಗಳು ತಂಬಾಕು ಅಭ್ಯಾಸವನ್ನು ಬಿಟ್ಟರೆ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದು ಅಧ್ಯಯನ ಹೇಳಿದೆ. ಅಂದರೆ, ಬಡತನದಲ್ಲಿರುವವರು ಮಧ್ಯಮ ವರ್ಗಕ್ಕೆ ಏರಲು ಈ ಒಂದು ಬದಲಾವಣೆ ಸಾಕು.
ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ: ದೇಶಾದ್ಯಂತ ಸುಮಾರು 1.5 ಕೋಟಿ ಕುಟುಂಬಗಳು ತಂಬಾಕು ಬಿಡುವುದರಿಂದ ಈಗಿರುವ ಆರ್ಥಿಕ ವರ್ಗಕ್ಕಿಂತ ಮೇಲಿನ ವರ್ಗಕ್ಕೆ (Economic Class) ಏರಬಹುದು. ತಂಬಾಕಿಗೆ ವ್ಯಯಿಸುವ ಹಣವನ್ನು ಉಳಿತಾಯ ಮಾಡಿದರೆ ಅಥವಾ ಸರಿಯಾದ ಹೂಡಿಕೆ ಮಾಡಿದರೆ ಅವರು ಲಕ್ಷಾಧಿಪತಿ ಮಾತ್ರವಲ್ಲ, ಕೋಟ್ಯಧಿಪತಿಗಳೂ ಆಗಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ.
ಶಿಕ್ಷಣ ಮತ್ತು ಆಹಾರದ ಮೇಲಿನ ಪ್ರಭಾವ: ತಂಬಾಕು ಬಳಸುವ ಕುಟುಂಬಗಳು ಆಹಾರ ಮತ್ತು ಶಿಕ್ಷಣಕ್ಕೆ ವ್ಯಯಿಸುವ ಹಣಕ್ಕಿಂತ ಸಿಗರೇಟು, ಬೀಡಿ, ಗುಟ್ಕಾಗಳ ಮೇಲೆ ಹೆಚ್ಚು ಹಣ ಖರ್ಚು ಮಾಡುತ್ತಿವೆ ಎಂದು ವರದಿ ಎಚ್ಚರಿಸಿದೆ.
ಆರೋಗ್ಯದ ಖರ್ಚು: ತಂಬಾಕಿನಿಂದ ಬರುವ ಕಾಯಿಲೆಗಳ ಚಿಕಿತ್ಸೆಗಾಗಿ ಮಾಡುವ ಖರ್ಚು ಆ ಕುಟುಂಬಗಳನ್ನು ಸಾಲದ ಸುಳಿಗೆ ದೂಡುತ್ತಿದೆ. ತಂಬಾಕು ಸೇವಿಸುವ ಕುಟುಂಬವು ತಿಂಗಳಿಗೆ ನೂರರಿಂದ ಸಾವಿರಾರು ರೂಪಾಯಿಗಳನ್ನು ವ್ಯಯಿಸುತ್ತಿದೆ. ಈ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿದರೆ ಜೀವನಮಟ್ಟ ಗಣನೀಯವಾಗಿ ಸುಧಾರಿಸುತ್ತದೆ.
ಸಾಮಾಜಿಕ ಜವಾಬ್ದಾರಿ: ತಂಬಾಕು ನಿಯಂತ್ರಣಕ್ಕೆ ಕೇವಲ ಕಾನೂನು ಸಾಲದು, ಜನರ ಆರ್ಥಿಕ ಅರಿವು ಕೂಡ ಮುಖ್ಯ. ತಂಬಾಕು ಬಿಡುವುದರಿಂದ ಕೇವಲ ಆರೋಗ್ಯ ಮಾತ್ರವಲ್ಲ, ಮನೆಯ ಸಿರಿ ಸಂಪತ್ತು ಕೂಡ ಹೆಚ್ಚುತ್ತದೆ ಎಂಬುದು ಪ್ರತಿಯೊಬ್ಬರೂ ಮನಗಾಣಬೇಕು.

