ಬೆಂಗಳೂರು: ಇಡೀ ರಾಜ್ಯದ ಕುತೂಹಲ ಕೆರಳಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇಂದು (ಏಪ್ರಿಲ್ 17) ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಸತತ 10 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ತೀರ್ಪನ್ನು ನೀಡಿದ್ದಾರೆ.
ಕೋರ್ಟ್‌ನಲ್ಲಿ ನಡೆದಿದ್ದೇನು?
ಶಿಕ್ಷೆಯ ಪ್ರಮಾಣ ಪ್ರಕಟಿಸುವ ಮುನ್ನ ನಡೆದ ವಿಚಾರಣೆಯಲ್ಲಿ ಸಿಬಿಐ ಪರ ವಕೀಲರು, ಇದೊಂದು “ಕೋಲ್ಡ್ ಬ್ಲಡೆಡ್ ಮರ್ಡರ್” ಎಂದು ವಾದಿಸಿ ಗರಿಷ್ಠ ಶಿಕ್ಷೆಗೆ ಆಗ್ರಹಿಸಿದ್ದರು. ಇತ್ತ ವಿನಯ್ ಕುಲಕರ್ಣಿ ಅವರು, “ನಾನು 27 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ, ಯಾರಿಗೂ ನೋವು ಮಾಡಿಲ್ಲ. ನನಗೆ ಮದುವೆ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ನಾನು 3,500 ಹಸುಗಳನ್ನು ಸಾಕುತ್ತಿರುವ ಕೃಷಿಕ” ಎಂದು ಭಾವುಕವಾಗಿ ಹೇಳಿಕೆ ನೀಡಿ ಕಡಿಮೆ ಶಿಕ್ಷೆಗೆ ಮನವಿ ಮಾಡಿದ್ದರು.
ಘಟನೆಯ ಹಿನ್ನೆಲೆ:
ಕೊಲೆ: 2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ ಜಿಮ್‌ನಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು.
ತನಿಖೆ: ಮೊದಲು ಸ್ಥಳೀಯ ಪೊಲೀಸರು ಇದನ್ನು ಆಸ್ತಿ ವಿವಾದ ಎಂದು ತನಿಖೆ ನಡೆಸಿದ್ದರು. ಆದರೆ, ಮೃತರ ಕುಟುಂಬದ ಒತ್ತಾಯದ ಮೇರೆಗೆ 2019ರಲ್ಲಿ ಪ್ರಕರಣ ಸಿಬಿಐ ಕೈಗೆ ಹೋದಾಗ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ಸಾಬೀತಾಗಿತ್ತು.
ಬಂಧನ: 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು.
ಧಾರವಾಡದ ‘ಯೋಗಿ’ ಹತ್ಯೆ ಪ್ರಕರಣಕ್ಕೆ ಇಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದ್ದು, ನ್ಯಾಯಾಲಯದ ತೀರ್ಪಿನಿಂದ ಮೃತ ಯೋಗೀಶ್ ಗೌಡ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.

