ಬೆಂಗಳೂರು ನಗರ ಮತ್ತು ಧರ್ಮಾವರಂ ನಡುವೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಮಹತ್ವದ ಅಪ್‌ಡೇಟ್ ಒಂದಿದೆ. ಯಲಹಂಕ-ಧರ್ಮಾವರಂ ನಡುವೆ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಂಚಾರ ನಡೆಸುವಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಸಂಚಾರದ ಅವಧಿ ಕಡಿಮೆ ಆಗಲಿದೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಈಗಾಗಲೇ ಬೆಂಗಳೂರು-ಜೋಲಾರ್‌ಪಟ್ಟಿ ನಡುವೆ ಗಂಟೆಗೆ 130 ಕಿ.ಮೀ.ವೇಗದಲ್ಲಿ ರೈಲು ಸಾಗುವಂತೆ ಕಾಮಗಾರಿ ಮುಕ್ತಾಯಗೊಳಿಸಿದೆ. ಈಗ ವಿಭಾಗ 2ನೇ ಹಂತದಲ್ಲಿ ಯಲಹಂಕ-ಧರ್ಮಾವರಂ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ.
ಮಾರ್ಚ್ 2026ರಲ್ಲಿ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ 40 ಪ್ರಯಾಣಿಕ ಮತ್ತು ಹಲವು ಗೂಡ್ಸ್ ರೈಲುಗಳಿಗೆ ಅನುಕೂಲವಾಗಲಿದ್ದು, ಸಂಚಾರದ ಅವಧಿ ಕಡಿತವಾಗಲಿದೆ. ಸದ್ಯ ಮಾರ್ಗದಲ್ಲಿ ರೈಲುಗಳು ಗಂಟೆಗೆ 110 ಕಿ.ಮೀ.ವೇಗದಲ್ಲಿ ಸಂಚಾರವನ್ನು ನಡೆಸುತ್ತಿದೆ.
ಯೋಜನೆ ವಿವರ: ಯಲಹಂಕ-ಧರ್ಮಾವರಂ ನಡುವಿನ 161 ಕಿ.ಮೀ. ಮಾರ್ಗದಲ್ಲಿ ಪ್ರತಿನಿತ್ಯ ಹಲವು ರೈಲುಗಳು ಸಂಚಾರವನ್ನು ನಡೆಸುತ್ತವೆ. ಭಾರತೀಯ ರೈಲ್ವೆ ಮುಖ್ಯ ಕಾರಿಡಾರ್‌ಗಳ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಸೂಚನೆ ನೀಡಿದ್ದು, ಇದರ ಭಾಗವಾಗಿ ಬೆಂಗಳೂರು ವಿಭಾಗದಲ್ಲಿ ಯಲಹಂಕ-ಧರ್ಮಾವರಂ ಆಯ್ಕೆ ಮಾಡಿಕೊಳ್ಳಲಾಗಿದೆ.
ಮಾರ್ಚ್ 2026ರ ಅಂತ್ಯಕ್ಕೆ ಯಲಹಂಕ-ಧರ್ಮಾವರಂ ಮಾರ್ಗದಲ್ಲಿ ಗಂಟೆಗೆ 130 ಕಿ.ಮೀ. ವೇಗದಲ್ಲಿ ರೈಲು ಸಾಗುವಂತೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಇದು ಬೆಂಗಳೂರು ವಿಭಾಗದ 2ನೇ ಮಾರ್ಗವಾಗಿದ್ದು, ಬೆಂಗಳೂರು-ಜೋಲಾರ್‌ಪಟ್ಟಿ ನಡುವೆ ಇಷ್ಟು ವೇಗದಲ್ಲಿ ಈಗಾಗಲೇ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸದ್ಯ ಇರುವ 110 ಕಿ.ಮೀ. ಇಂದ 130 ಕಿ.ಮೀ.ಗೆ ಮೂಲ ಸೌಕರ್ಯ ಅಭಿವೃದ್ಧಿ ಮಾಡಲಾಗುತ್ತದೆ. ಭವಿಷ್ಯದಲ್ಲಿ ಗಂಟೆಗೆ 160 ಕಿ.ಮೀ.ವೇಗದಲ್ಲಿ ರೈಲುಗಳು ಸಾಗುವಂತೆ ಮಾಡುವ ಪ್ರಸ್ತಾಪವೂ ಇಲಾಖೆಯ ಮುಂದಿದೆ.
ಈ ಕಾಮಗಾರಿ ಪೂರ್ಣಗೊಂಡರೆ ಪ್ರತಿದಿನ ಸಂಚಾರ ನಡೆಸುವ 40ಕ್ಕೂ ಅಧಿಕ ರೈಲುಗಳಿಗೆ ಸಹಾಯಕವಾಗಲಿದೆ. ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ ಮುಂತಾದ ರಾಜ್ಯಗಳಿಗೆ ತೆರಳುವ ರೈಲುಗಳಿಗೆ ಅನುಕೂಲವಾಗಲಿದೆ. ಯಶವಂತಪುರ-ಕಾಚಿಗುಡ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಹ ಇದೇ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ.
ಇದೇ ಮಾದರಿಯಲ್ಲಿ ಬೆಂಗಳೂರು ವಿಭಾಗ ಬೆಂಗಳೂರು-ಸಂಪಿಗೆ ರಸ್ತೆ, ಚಿಕ್ಕಬಣಾವರ-ಹಾಸನ ಮಾರ್ಗವನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ. ಆದರೆ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಇರುವ ತಿರುವುಗಳ ಕಾರಣಕ್ಕೆ ಇಂತಹ ಕಾಮಗಾರಿ ಸವಾಲಿನ ಕೆಲಸವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಲಹಂಕ-ಧರ್ಮಾವರಂ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡರೆ ರೈಲುಗಳು ಬೇಗ ನಗರಕ್ಕೆ ಆಗಮಿಸಬಹುದು. ಬೆಂಗಳೂರು ನಗರದಿಂದ ಹೈದರಾಬಾದ್, ಮುಂಬೈ, ದೆಹಲಿ, ಅಹಮದಾಬಾದ್, ಜೋಧ್‌ಪುರ್, ವಾರಣಾಸಿ ಮತ್ತು ಲಕ್ನೋ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ.
ಬೆಂಗಳೂರು ನಗರದ ವಿವಿಧ ನಿಲ್ದಾಣದಲ್ಲಿ ನಡೆಯುತ್ತಿರುವ ಪ್ಲಾಟ್ ಫಾರಂ ಕಾಮಗಾರಿ ಮತ್ತು ಇತರ ಕಾಮಗಾರಿಗಳು ಮುಕ್ತಾಯವಾಗದರೆ ಪ್ಯಾಸೆಂಜರ್ ರೈಲುಗಳಿಗೆ ಸರಿಯಾಗಿ ಸ್ಥಳ ಸಿಗಲಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.

