ಬೀದರ್: ಶಾಸಕ ಸುಬ್ಬಾರೆಡ್ದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕರ ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವಿಚಾರವಾಗಿ ಬೀದರ್ ನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಯತೀಂದ್ರ ಸಿದ್ದರಾಮಯ್ಯ, ಶಾಸಕರ ಬೆಂಬಲಿಗರು ಉದ್ರೇಕಗೊಂಡು ತಾಲೂಕುಗಳನ್ನು ಬಂದ್ ಮಾಡಿ ಸರ್ಕಾರದ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿರುವುದು ತಪ್ಪು ಎಂದು ತಿಳಿಸಿದ್ದಾರೆ.
ಬೀದರ್ ನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅಸಮಾಧಾನಗೊಂಡಿರುವ ಶಾಸಕರ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಮಾಡಲಿದೆ. ಸಚಿವ ಸ್ಥಾನ ಸಿಗದವರಿಗೆ ನಿಗಮ-ಮಂಡಳಿ ಸೇರಿದಂತೆ ಸೂಕ್ತ ಸ್ಥಾನಮಾನಗಳನ್ನು ನೀಡಿ ಸಮಾಧಾನಪಡಿಸುವ ಪ್ರಯತ್ನ ನಡೆಯಲಿದೆ ಎಂದರು.
ಚಿಕ್ಕಬಳ್ಳಾಪುರದ ಹಲವು ತಾಲೂಕುಗಳಲ್ಲಿ ಬಂದ್ ನಡೆಸಲಾಗಿದೆ. ಬೇರೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ ಅಥವಾ ಎಲ್ಲ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂದು ಅರ್ಥವಲ್ಲ. ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೊನೆಗೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.
ಸಚಿವ ಸಂಪುಟದಲ್ಲಿ ಕೇವಲ 34 ಸ್ಥಾನಗಳಿವೆ. ಹೀಗಾಗಿ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ, ಬಹುತೇಕ ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ ಎಂದು ಇದೇ ವೇಳೆ ಹೇಳಿದರು.
ಈ ರೀತಿ ಬಂದ್, ಪ್ರತಿಭಟನೆ ಮಾಡಿ ಸರ್ಕಾರಿ ಆಸ್ತಿಗೆ ಹಾನಿ ಮಾಡುವುದು ಸರಿಯಲ್ಲ. ಎಲ್ಲರೂ ತಾಳ್ಮೆಯಿಂದ ಇದ್ದರೆ ಒಂದಲ್ಲೊಂದು ದಿನ ಅವಕಾಶ ಸಿಗುತ್ತದೆ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಮಾತಿಗೆ ಎಲ್ಲರೂ ಗೌರವ ಕೊಡುತ್ತಾರೆ ಎಂದು ಹೇಳಿದರು.
ಇನ್ನು ಸಚಿವ ಸ್ಥಾನ ಸಿಗದಿದ್ದಾಗ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸುವುದು, ಕೆಲವರು ರಾಜೀನಾಮೆ ಕೊಡುವುದು ಹೊಸದೇನಲ್ಲ, ಇದು ಸಹಜ. ಏನೇ ಅಸಮಾಧಾನವಾದರೂ ಹೈಕಮಾಂಡ್ ನಾಯಕರು ಮನವೊಲಿಕೆ ಮಾಡಲಿದ್ದಾರೆ ಎಂದರು.

