ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ-2026ಕ್ಕೆ ಚಾಲನೆ ಸಿಕ್ಕಿದೆ. ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ರೈತರಿಂದ ನೇರವಾಗಿ ಗ್ರಾಹಕರಿಗೆ ಎಂಬ ಪರಿಕಲ್ಪನೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಶಿವರಾತ್ರಿ ಪ್ರಯುಕ್ತ ಈ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ಫೆಬ್ರವರಿ 12 ರಿಂದ 16ರ ತನಕ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಹಲಸು, ಜೇನು ಹಾಗೂ ಅಣಬೆ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಈ ಮೇಳದ ಪ್ರಮುಖ ಆಕರ್ಷಣೆ ‘ಯರ್ಸಗುಂಬ’ ಹೆಸರಿನ ಜಗತ್ತಿನ ದುಬಾರಿ ಅಣಬೆ.
ಜಗತ್ತಿನ ದುಬಾರಿ ಅಣಬೆ: ‘ಯರ್ಸಗುಂಬ ಅಣಬೆ’ ಈ ಮೇಳದ ಪ್ರದರ್ಶನಕ್ಕೆ ಇಡಲಾಗಿದೆ. ಹಿಮಾಲಯದಲ್ಲಿ ಬೆಳೆಯುವ ಜಗತ್ತಿನ ಅತ್ಯಂತ ದುಬಾರಿ ಅಣಬೆ ಇದು. ಪ್ರತಿ ಕೆಜಿಗೆ ರೂ. 15 ಲಕ್ಷ ಮೌಲ್ಯವಿದೆ. ‘ಯರ್ಸಗುಂಬ’ ಅಣಬೆ ಪ್ರದರ್ಶನದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಇದನ್ನು ನೋಡಲು ಜನರು ಅತ್ಯಂತ ಉತ್ಸಾಹದಿಂದ ಆಗಮಿಸುತ್ತಿದ್ದಾರೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೆಶಕ ಕೃಷ್ಣ ಉಕ್ಕುಂದ ಮಾತನಾಡಿ, “ಶಿವರಾತ್ರಿ ಪ್ರಯುಕ್ತ 9ನೇ ವರ್ಷದ ಹಣ್ಣು, ಜೇನು ಮತ್ತು ಅಣಬೆ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಫೆಬ್ರುವರಿ 16 ರವರೆಗೆ ಹಮ್ಮಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಎಲ್ಲಾ ರೈತರು ಬೆಳೆದ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ” ಎಂದರು.
“ವಿವಿಧ ಜೇನು ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಈ ವರ್ಷ ಅಣಬೆ ಮೇಳವನ್ನು ವಿಶೇಷವಾಗಿ ಮಾಡುತ್ತಿದ್ದು ಇದರ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಜಗತ್ತಿನ ದುಬಾರಿ ಅಣಬೆ ಯರ್ಸಗುಂಬ ಅಣಬೆ ಇದರ ಬೆಲೆಯು ಒಂದು ಕೆಜಿಗೆ 15 ಲಕ್ಷ ರೂ. ಆಗಿದ್ದು, ಇದನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಅಣಬೆಯನ್ನು ಭಾರತ ದೇಶದ ಹಿಮಾಚಲ ಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಾರೆ” ಎಂದು ಹೇಳಿದರು.
ಈ ಮೇಳದಲ್ಲಿ ವಿವಿಧ ವಿದೇಶಿ ತಳಿಯ ಹಣ್ಣುಗಳು, ಸ್ವದೇಶಿ ಹಾಗೂ ಜಿಲ್ಲೆಯ ರೈತರು ಬೆಳೆದ ಪ್ಪಪಾಯ, ದ್ರಾಕ್ಷಿ, ಕಲ್ಲಂಗಡಿ, ದಾಳಿಂಬೆ, ಪರಲ, ಅಂಜೂರ, ಪಪ್ಪಾಯ, ಹಲಸು, ಬಾಳೆ, ಸಪೋಟ ಹಾಗೂ ಅಣಬೆ, ಜೇನುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳು ಸಹ ಪ್ರದರ್ಶನದಲ್ಲಿ ಇಡಲಾಗಿದೆ. 5 ದಿನಗಳ ಕಾಲ ಕೊಪ್ಪಳ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆಯುವ ಕೊಪ್ಪಳ ಜಿಲ್ಲೆಯ ಹಣ್ಣುಗಳು, ಜೇನು ಮತ್ತು ಅಣಬೆ ಮೇಳದಲ್ಲಿ ಸಾರ್ವಜನಿಕರು ಪಾಲ್ಗೊಂಡು ತಾಜಾ ಹಣ್ಣುಗಳನ್ನು ರೈತರಿಂದ ನೇರವಾಗಿ ಖರಿದೀಸಿ, ರೈತರನ್ನು ಪ್ರತ್ಸಾಹಿಸಬೇಂಕೆದು ಮನವಿ ಮಾಡಲಾಗಿದೆ.
ಈ ಮೇಳವನ್ನು ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷರು ಹಾಗೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು.
“ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯು ತೋಟಗಾರಿಕೆ ಕ್ಷೇತ್ರದಲ್ಲಿ ಅತ್ಯಮೂಲ್ಯ ಬದಲಾವಣೆಯನ್ನು ಕಾಣುತ್ತಿದೆ. ನಮ್ಮ ಜಿಲ್ಲೆಯು ತೋಟಗಾರಿಕೆ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮುಂದೆ ಬರುತ್ತಿದ್ದು, ಇದಕ್ಕೆ ಕಾರಣ ರೈತರು, ವಾಣಿಜ್ಯ ಬೆಳೆಗಳಾದ ಮಾವಿನ ಹಣ್ಣು, ಬಾಳೆ, ದ್ರಾಕ್ಷಿ, ಪೇರಲ, ಪಪ್ಪಾಯ ಸೇರಿದಂತೆ ವಿವಿಧ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ ಹಾಗೂ ಅಣಬೆ ಮತ್ತು ಜೇನು ಕೃಷಿಯಲ್ಲಿಯೂ ಹೆಚ್ಚು ಆಸಕ್ತಿ ತೋರುತ್ತಿರುವುದು ಮತ್ತೊಂದು ವಿಶೇಷವಾಗಿದೆ” ಎಂದರು.

