ಬೆಂಗಳೂರು: ಪಿಜಿಗಳಿಗೆ ನುಗ್ಗಿ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನು ಕದ್ದು, ಅವುಗಳನ್ನು ವಿಚಿತ್ರ ರೀತಿಯಲ್ಲಿ ಜೋಡಿಸಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದ ಕಾಮುಕನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೋರಮಂಗಲ ವ್ಯಾಪ್ತಿಯ ಕೋ-ಲಿವಿಂಗ್ ಪಿಜಿಗಳನ್ನೇ ಟಾರ್ಗೆಟ್ ಮಾಡಿ ಯುವತಿಯರ ಬಟ್ಟೆ, ಪ್ಯಾಡ್ ಗಳನ್ನು ಈತ ಕದಿಯುತ್ತಿದ್ದ. ಸದ್ಯ ಕೋರಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗಿರಿರಾಜ್ ಎಂದು ಗುರುತಿಸಲಾಗಿದ್ದು, ಈತ ಪ್ರತಿಷ್ಠಿತ ಸಂಸ್ಥೆಯಲ್ಲಿ ಆಡಿಟ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕೋರಮಂಗಲದ ಖಾಸಗಿ ಪಿಜಿಯೊಂದರಲ್ಲಿ ಪದೇಪದೇ ಯುವತಿಯರ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳು ಕಾಣೆಯಾಗುತ್ತಿದ್ದವು. ಹೊರಗಿನ ವ್ಯಕ್ತಿಯೊಬ್ಬ ಪಿಜಿಗೆ ಬಂದು ಕಳ್ಳತನ ಮಾಡಿರುವ ಯಾವುದೇ ಸುಳಿವು ಆರಂಭದಲ್ಲಿ ಪೊಲೀಸರಿಗೆ ಸಿಕ್ಕಿರಲಿಲ್ಲ. ಈ ಕುರಿತು ಪಿಜಿಯಲ್ಲಿದ್ದ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಪಿಜಿಯಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪರಿಶೀಲಿಸಿದ್ದಾರೆ. ಈ ವೇಳೆ ವ್ಯಕ್ತಿಯ ಕೈಚಳಕ ಬೆಳಕಿಗೆ ಬಂದಿದೆ.
ಪಿಜಿಯ ಮೊದಲ ಮಹಡಿಯಲ್ಲಿ ಮಹಿಳೆಯರು ಹಾಗೂ ಎರಡನೇ ಮಹಡಿಯಲ್ಲಿ ಪುರುಷರು ವಾಸಿಸುತ್ತಿದ್ದರು. ತನಿಖೆ ವೇಳೆ ಎರಡನೇ ಮಹಡಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಮೊದಲ ಮಹಡಿಯ ರೂಮ್‌ಗಳಿಗೆ ತೆರಳಿ ಕಳ್ಳತನ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ರೂಮ್‌ನಲ್ಲಿ ಯಾರೂ ಇಲ್ಲದಿರುವುದನ್ನ ಗಮನಿಸಿ ಆರೋಪಿ ಒಳಉಡುಪು ಹಾಗೂ ಸ್ಯಾನಿಟರಿ ಪ್ಯಾಡ್‌ಗಳನ್ನ ಕದಿಯುತ್ತಿದ್ದ.
ಹೀಗೆ ಕದ್ದ ವಸ್ತುಗಳನ್ನು ತನ್ನ ರೂಮ್‌ನಲ್ಲಿ ವಿಚಿತ್ರ ರೀತಿಯಲ್ಲಿ ಜೋಡಿಸಿಕೊಂಡು ಲೈಂಗಿಕವಾಗಿ ತೃಪ್ತಿ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

