ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ19ನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಖ್ಯಾತ ಅಂಕಣಗಾರ್ತಿ ಶೋಭಾ ಡೇ ಉತ್ಸವದ ಪತ್ರಿಕಾಗೋಷ್ಠಿಯಲ್ಲಿ ಹಲವಾರು ವಿಚಾರಗಳ ಕುರಿತು ಮಾತನಾಡಿದ್ದಾರೆ. ಕೆಲಸದ ಸ್ಥಳದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಪರಿಶೀಲನೆಗೆ ಒಳಗಾಗುತ್ತಾರೆ ಎಂದು ಅವರು ಹೇಳಿದ್ದಾರೆ.
ಶೋಭಾ ಡೇ ಅವರು ಸ್ತ್ರೀವಾದ, ಆರ್ಥಿಕ ಸ್ವಾತಂತ್ರ್ಯ ಮತ್ತು ಕೆಲಸದ ಸ್ಥಳದಲ್ಲಿ ಕಂಡುಬರುವ ತಾರತಮ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಶಕ್ತಿಯ ಸಮತೋಲನದಿಂದ ಹಿಡಿದು ಉದ್ಯೋಗಸ್ಥ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳವರೆಗೆ ವಿವಿಧ ವಿಷಯಗಳ ಕುರಿತು ಚರ್ಚಿಸಿದ ಅವರು, ಮಹಿಳಾ ಸಬಲೀಕರಣಕ್ಕೆ ಆರ್ಥಿಕ ಸ್ವಾತಂತ್ರ್ಯವೇ ಅತ್ಯಂತ ಬಲವಾದ ಅಡಿಪಾಯ ಎಂದು ವಾದಿಸಿದರು. ಇದೇ ವೇಳೆ, ಅವರು ಮುಂದಿನ ಪೀಳಿಗೆಯ ಮಹಿಳೆಯರ ಬಗ್ಗೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಶೋಭಾ ಡೇ ಅವರು ಹೇಳಿದ್ದೇನು?: ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಂದ ತುಂಬಿದ್ದ ಸಭಾಂಗಣದಲ್ಲಿ ಮಾತನಾಡಿದ ಶೋಭಾ ಡೇ ಅವರು, ಆರ್ಥಿಕ ಸ್ವಾತಂತ್ರ್ಯವೇ ಸ್ತ್ರೀವಾದದ ನಿಜವಾದ ಬೆನ್ನೆಲುಬು ಎಂದು ಪ್ರತಿಪಾದಿಸಿದರು.
ಶೋಭಾ ಡೇ ಅವರು, “ಅನೇಕ ಮಹಿಳೆಯರು ಅನ್ಯಾಯದ ವ್ಯವಸ್ಥೆಗಳ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವುದು ಅವರಿಗೆ ಅರಿವಿನ ಕೊರತೆ ಇರುವುದರಿಂದಲ್ಲ, ಬದಲಿಗೆ ಆರ್ಥಿಕ ಸ್ವಾತಂತ್ರ್ಯದ ಕೊರತೆಯಿಂದಾಗಿ” ಎಂದರು.
“ತಮ್ಮ ಕಾನೂನಾತ್ಮಕ ಸ್ಥಾನಮಾನದ ಬಗ್ಗೆ ಅರಿವಿಲ್ಲದ ಕಾರಣ ಮತ್ತು ಸ್ವಂತ ಹಣ ಗಳಿಸದ ಕಾರಣ ನ್ಯಾಯಾಲಯದಲ್ಲಿ ಹೋರಾಡಲು ಬೇಕಾದ ಸಂಪನ್ಮೂಲಗಳಿಲ್ಲದೆ ಅವರು ಸುಮ್ಮನಾಗುತ್ತಾರೆ. ದಿನದ ಕೊನೆಯಲ್ಲಿ, ಇದೆಲ್ಲವೂ ಆರ್ಥಿಕವಾಗಿ ಸ್ವತಂತ್ರರಾಗಿರುವುದಕ್ಕೆ ಬಂದು ನಿಲ್ಲುತ್ತದೆ. ಬದಲಾವಣೆ ಈಗಾಗಲೇ ಆರಂಭವಾಗುತ್ತಿರುವುದನ್ನು ತಾವು ಕಾಣುತ್ತಿದ್ದು, ಹಿಂದಿನವರಿಗಿಂತ ಇಂದಿನ ಯುವತಿಯರು ತಮ್ಮ ಹಕ್ಕುಗಳನ್ನು ಉತ್ತಮವಾಗಿ ಪ್ರತಿಪಾದಿಸುತ್ತಿದ್ದಾರೆ” ಎಂದು ತಿಳಿಸಿದರು.
ಪುರುಷ ಮತ್ತು ಸ್ತ್ರೀ ಶಕ್ತಿಗಳ ನಡುವಿನ ವ್ಯತ್ಯಾಸವು ಲಿಂಗ ತಾರತಮ್ಯವನ್ನು ಬಲಪಡಿಸುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ತಾವು ಒಬ್ಬ ಹಿಂದೂ ಧರ್ಮದ ಅನುಯಾಯಿಯಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಈ ಎರಡೂ ಶಕ್ತಿಗಳು ಸಹಬಾಳ್ವೆ ನಡೆಸುತ್ತವೆ ಎಂದು ನಂಬುವುದಾಗಿ” ಹೇಳಿದರು.
“ಗಂಡು ಮತ್ತು ಹೆಣ್ಣು ಶಕ್ತಿಯ ಪರಿಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇದು ಒಂದು ಸುಂದರ ಸಮತೋಲನ. ಇವುಗಳು ಪ್ರತ್ಯೇಕವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಈ ಶಕ್ತಿಗಳನ್ನು ಬಳಸಿಕೊಳ್ಳುವ ಸಾಮರ್ಥ್ಯ ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಇದೆ” ಎಂದರು.
ಉದ್ಯೋಗಸ್ಥ ಮಹಿಳೆಯರ ಒತ್ತಡ: ಉದ್ಯೋಗಸ್ಥ ಮಹಿಳೆಯರು ಎಲ್ಲಾ ರಂಗಗಳಲ್ಲೂ ಪರಿಪೂರ್ಣರಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದರು, “ಒತ್ತಡ ಎಂಬುದು ಎಲ್ಲರಿಗೂ ಇರುತ್ತದೆ, ಆದರೆ ಮಹಿಳೆಯರನ್ನು ಹೆಚ್ಚು ಕಟ್ಟುನಿಟ್ಟಾಗಿ ಅಳೆಯಲಾಗುತ್ತದೆ” ಎಂದು ಹೇಳಿದರು.
“ಕೆಲಸದ ಸ್ಥಳದಲ್ಲಿ ಮಹಿಳೆ ಹೇಗೆ ಉಡುಗೆ ತೊಡುತ್ತಾಳೆ?, ಅವಳ ದೇಹಭಾಷೆ ಮತ್ತು ಅವಳು ಹೇಗೆ ಮಾತುಕತೆ ನಡೆಸುತ್ತಾಳೆ? ಎಂಬುದನ್ನು ಗಮನಿಸಲಾಗುತ್ತದೆ. ಅವಳಿಗೆ ಬಡ್ತಿ ಸಿಕ್ಕರೆ, ಅದಕ್ಕೆ ಇತರ ಕಾರಣಗಳನ್ನು ಹುಡುಕುತ್ತಾರೆ. ಅವಳ ಅರ್ಹತೆಗೆ ಮನ್ನಣೆ ನೀಡಲು ಅವರು ಹಿಂಜರಿಯುತ್ತಾರೆ. ಇದು ಕೇವಲ ಭಾರತದ ಸಮಸ್ಯೆಯಲ್ಲ, ವಿದೇಶಗಳಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ” ಎಂದರು.
ಬಾಲಿವುಡ್ ಕುರಿತು ಮಾತನಾಡಿ, ಧಾರ್ಮಿಕ ತಾರತಮ್ಯವಿದೆ ಎಂಬ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಇತ್ತೀಚಿನ ಹೇಳಿಕೆಯನ್ನು ಶೋಭಾ ಡೇ ಬಲವಾಗಿ ತಳ್ಳಿಹಾಕಿದರು. “ಅವರ ಮಾತನ್ನು ನಾನು ಒಪ್ಪುವುದಿಲ್ಲ, ಅದು ನಕಾರಾತ್ಮಕ ದೃಷ್ಟಿಕೋನ. ಅವರ ಪ್ರಕಾರ ಬಾಲಿವುಡ್ ಹೆಚ್ಚಾಗಿ ಪ್ರತಿಭೆಯ ಮೇಲೆ ನಡೆಯುತ್ತದೆ” ಎಂದು ಹೇಳಿದರು.

