ಬೆಂಗಳೂರು: ವ್ಯಕ್ತಿಯ ಅಕ್ರಮ ಸಂಬಂಧದ ಬಗ್ಗೆ ಮಹಿಳೆಯೊಬ್ಬಳು ಆತನ ಪತ್ನಿಗೆ ವಿಷಯ ಹೇಳಿದ್ದಕ್ಕೆ ವ್ಯಕ್ತಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ವಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧದ ಬಗ್ಗೆ ಪತ್ನಿಗೆ ತಿಳಿಸಿದ್ದಾರೆ ಎಂಬ ಆರೋಪದ ಮೇಲೆ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.
ನಾಗರಾಜ್ ಎಂಬಾತ ಮತ್ತು ಅವರ ಮಗ ಲೋಕೇಶ್ ಮಹಿಳೆ ಮೇಲೆ ಹಲ್ಲೆ ನಡೆಸಿದವರು. ಘಟನೆ ರಾತ್ರಿ 10 ಗಂಟೆ ಸುಮಾರಿಗೆ ಮಹಿಳೆಯ ಮನೆಯ ಬಳಿ ನಡೆದಿದೆ. ಆರೋಪಿಗಳಾದ ನಾಗರಾಜ್ ಮತ್ತು ಲೋಕೇಶ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಅವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ವಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಎರಡೂ ದಾಖಲಾಗಿವೆ.
ಅಕ್ರಮ ಸಂಬಂಧದ ಬಗ್ಗೆ ನೇರವಾಗಿ ಯಾರಿಗೂ ಹೇಳಿರಲಿಲ್ಲ. ಸಂಬಂಧಪಟ್ಟವರ ಪತ್ನಿ ತಾನೇ ಕೇಳಿದಾಗ, ಅದಕ್ಕೆ ಉತ್ತರ ನೀಡಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಆನಂತರ ತಂದೆ-ಮಗ ಏಕಾಏಕಿ ಬಂದು ತಮ್ಮ ಮೇಲೆ ಹಲ್ಲೆ ನಡೆಸಿ, ಎಳೆದಾಡಿ, ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

