ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಸೋಮವಾರ ಬೆಳಗ್ಗೆ ಮನೆ ಬಾಗಿಲಿಗೆ ನೀರು ಹಾಕುತ್ತಿದ್ದ ಮಹಿಳೆಗೆ ಚಾಕು ತೋರಿಸಿ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಭದ್ರಾವತಿ ಪೊಲೀಸರು 24 ಗಂಟೆಗಳಲ್ಲಿ ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕಡರನಾಯಕನಹಳ್ಳಿಯ ಹೊಸಪಾಳ್ಯ ಗ್ರಾಮದ ಬಿ. ಪ್ರತಾಪ್(25) ಬಂಧಿತ ಆರೋಪಿ. ಭದ್ರಾವತಿಯ ಜೆಡಿಕಟ್ಟೆಯ ಭಾಗ್ಯ(23) ಮನೆಯ ಬಳಿ ಬಾಗಿಲು ತೊಳೆಯಲು ಡ್ರಮ್ ನಿಂದ ನೀರು ತೆಗೆಯುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಆರೋಪಿ ಚಾಕು ತೋರಿಸಿ ಬೆದರಿಸಿದ್ದಾನೆ.
ಚಾಕುವಿನಿಂದ ಇರಿಯುವುದಾಗಿ ಬೆದರಿಸಿ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ. ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಾಂಗಲ್ಯ ಸರ, ಚಾಕು ಹಾಗೂ ಬೈಕ್ ಸೇರಿ 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

