ಬರೇಲಿ (ಉತ್ತರ ಪ್ರದೇಶ): ಹಣದ ಮದ ಅದೆಷ್ಟು ಅಂಧವಾಗಿಸುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಕೇವಲ 1,200 ರೂಪಾಯಿ ಸಾಲವನ್ನು ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ಶ್ರೀಮಂತ ಮಹಿಳೆಯೊಬ್ಬರು ಬಡ ಮಹಿಳೆಗೆ ರೇಷನ್ ಅಂಗಡಿಯ ಮುಂದೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲೇನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ, ರೇಷನ್ ಅಂಗಡಿಯ ಹೊರಗೆ ನಿಂತಿರುವ ಮಹಿಳೆಯೊಬ್ಬರಿಗೆ ಮತ್ತೊಬ್ಬ ಮಹಿಳೆ ಸತತವಾಗಿ ಐದು ಬಾರಿ ಕಪಾಳಕ್ಕೆ ಹೊಡೆಯುತ್ತಿರುವುದು ಕಂಡುಬಂದಿದೆ. ಹೊಡೆತ ತಿನ್ನುತ್ತಿರುವ ಮಹಿಳೆ ಯಾವುದೇ ಪ್ರತಿರೋಧ ತೋರದೆ ಮೌನವಾಗಿ ನಿಂತಿರುವುದು ನೋಡುಗರ ಮನ ಕರಗುವಂತೆ ಮಾಡಿದೆ. ಅಂಗಡಿಯ ಕೌಂಟರ್ ಬಳಿ ಇದ್ದ ವ್ಯಕ್ತಿಯೊಬ್ಬರು ಏನೂ ಮಾಡಲಾಗದೆ ಸುಮ್ಮನೆ ನೋಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಸುಪ್ರಿಯಾ ಶ್ರೀನೇತ್ ಆಕ್ರೋಶ:
ಈ ವಿಡಿಯೋ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರ ಗಮನವನ್ನೂ ಸೆಳೆದಿದೆ. ಅವರು ಎಕ್ಸ್ (X) ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, “ಬಡ ಮಹಿಳೆ 1,200 ರೂಪಾಯಿ ಸಾಲ ಮಾಡಿದ್ದಕ್ಕೆ ಆಕೆಗೆ ಐದು ಬಾರಿ ಕಪಾಳಮೋಕ್ಷ ಮಾಡಲಾಗಿದೆ. ಬಡತನ ಮತ್ತು ಅಸಹಾಯಕತೆ ಇದೆ ಎಂದ ಮಾತ್ರಕ್ಕೆ ಶ್ರೀಮಂತ ಮಹಿಳೆಯೊಬ್ಬರು ಈ ರೀತಿ ಕೈ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ:
ಈ ವಿಡಿಯೋ ಹಂಚಿಕೊಂಡಿರುವ ಘರ್ ಕೆ ಕಲೇಷ್ ಎಂಬ ಎಕ್ಸ್ ಖಾತೆಯಲ್ಲಿ ಜನರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಲದ ಜೊತೆಗೆ ಈ ಕಪಾಳಮೋಕ್ಷದ ಹಣವನ್ನೂ ಆ ಮಹಿಳೆ ವಾಪಸ್ ಪಡೆಯುತ್ತಾಳೆಯೇ? ಎಂದು ಒಬ್ಬರು ಪ್ರಶ್ನಿಸಿದರೆ,
ಇಂದಿನ ಕಾಲದಲ್ಲಿ ಮನುಷ್ಯತ್ವ, ಕರುಣೆ ಎಂಬುದು ಸತ್ತು ಹೋಗಿದೆ ಎಂದು ಮತ್ತೊಬ್ಬರು ಮರುಕ ವ್ಯಕ್ತಪಡಿಸಿದ್ದಾರೆ.

