HomeIndiaಕೈದಿ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಜೈಲೊಳಗೆ ವಿಡಿಯೋ ಶೂಟ್: ಪೊಲೀಸರ ಕಣ್ತಪ್ಪಿಸಿ ಮೊಬೈಲ್ ಕೊಂಡೊಯ್ದ ಯುವತಿ

ಕೈದಿ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ಜೈಲೊಳಗೆ ವಿಡಿಯೋ ಶೂಟ್: ಪೊಲೀಸರ ಕಣ್ತಪ್ಪಿಸಿ ಮೊಬೈಲ್ ಕೊಂಡೊಯ್ದ ಯುವತಿ

ಛತ್ತೀಸ್‌ಗಢದ ರಾಯ್‌ಪುರ ಕೇಂದ್ರ ಕಾರಾಗೃಹವು ಮತ್ತೊಮ್ಮೆ ಭಾರಿ ವಿವಾದಕ್ಕೆ ಸಿಲುಕಿದೆ. ಜೈಲಿನ ಕಟ್ಟುನಿಟ್ಟಿನ ಭದ್ರತಾ ನಿಯಮಗಳನ್ನು ಗಾಳಿಗೆ ತೂರಿರುವ ಯುವತಿಯೊಬ್ಬಳು, ಕೈದಿಯಾಗಿರುವ ತನ್ನ ಪ್ರಿಯಕರನ ಭೇಟಿಯ ವೇಳೆ ಜೈಲಿನ ಆವರಣದೊಳಗೇ ಕುಳಿತು ವಿಡಿಯೋ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ.

NDPS ಕಾಯ್ದೆಯಡಿ ಜೈಲು ಪಾಲಾಗಿರುವ ತಾರ್ಕೇಶ್ವರ್ ಎಂಬ ವಿಚಾರಣಾಧೀನ ಕೈದಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಯುವತಿ ಆತನನ್ನು ಭೇಟಿ ಮಾಡಲು ಜೈಲಿಗೆ ಬಂದಿದ್ದಳು. ಜೈಲಿನ ಸಂದರ್ಶಕರ ಕೊಠಡಿಯಲ್ಲೇ ಮೊಬೈಲ್ ಬಳಸಿ ವಿಡಿಯೋ ಮಾಡಿರುವ ಆಕೆ, “ಇಂದು ನನ್ನ ಪ್ರೀತಿಯ ಹುಟ್ಟುಹಬ್ಬ, ಆತನನ್ನು ಭೇಟಿ ಮಾಡಲು ಸೆಂಟ್ರಲ್ ಜೈಲಿಗೆ ಬಂದಿದ್ದೇನೆ. ಈ ಸಂಭ್ರಮದ ದಿನ ಆತ ನನ್ನ ಜೊತೆ ಇಲ್ಲದಿರುವುದು ನೋವು ತರುತ್ತಿದೆ. ನನ್ನನ್ನು ನೋಡಿ ಆತನ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡೋಣ” ಎಂದು ಭಾವನಾತ್ಮಕವಾಗಿ ಮಾತನಾಡುತ್ತಾ ರೀಲ್ಸ್ ಮಾಡಿದ್ದಾಳೆ.

ಜೈಲಿನೊಳಗೆ ಮೊಬೈಲ್ ಫೋನ್ ಕೊಂಡೊಯ್ಯುವುದು ಕಟ್ಟುನಿಟ್ಟಾಗಿ ನಿಷೇಧವಿದ್ದರೂ, ಆಕೆ ಫೋನ್ ತೆಗೆದುಕೊಂಡು ಹೋಗಿದ್ದಲ್ಲದೆ, ಜೈಲಿನ ಒಳಗೆ ಮತ್ತು ಹೊರಗೆ ಅನೇಕ ವಿಡಿಯೋ ತುಣುಕುಗಳನ್ನು ಚಿತ್ರೀಕರಿಸಿ, ಅದಕ್ಕೆ ಬಾಲಿವುಡ್ ಹಾಡನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜೈಲು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಯ್‌ಪುರ ಜೈಲಿನಲ್ಲಿ ಇಂತಹ ಭದ್ರತಾ ಲೋಪಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮೊಹಮ್ಮದ್ ರಶೀದ್ ಅಲಿ ಎಂಬ ಗಂಭೀರ ಅಪರಾಧದ ಆರೋಪಿಯೊಬ್ಬ ಜೈಲಿನೊಳಗಿಂದಲೇ ವರ್ಕೌಟ್ ವಿಡಿಯೋ ಮತ್ತು ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದ. ಅಷ್ಟೇ ಅಲ್ಲದೆ, ಜಾರ್ಖಂಡ್ ಮೂಲದ ಗ್ಯಾಂಗ್‌ಸ್ಟರ್ ಅಮನ್ ಸಾವ್ ಕೂಡ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಜೈಲು ಸಿಬ್ಬಂದಿ ಮತ್ತು ಕೈದಿಗಳ ನಡುವಿನ ಶಾಮೀಲಿನ ಅನುಮಾನವನ್ನು ಬಲಪಡಿಸಿದೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಜೈಲು ಆಡಳಿತ ಮಂಡಳಿಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular