ಬೆಂಗಳೂರು: ಹೋಂ ವರ್ಕ್ ಮಾಡಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು 4 ನೇ ತರಗತಿ ವಿದ್ಯಾರ್ಥಿಯ ಮೇಲೆ ಮನಬಂದಂತೆ ಹೊಡೆದು ಬಾಸುಂಡೆ ಬರಿಸಿದ್ದೂ ಅಲ್ಲದೇ, ಮನೆಯಲ್ಲಿ ಹೇಳಿದರೆ ಕತ್ತು ಹಿಸುಕುವುದಾಗಿ ಬೆದರಿಕೆ ಹಾಕಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿಯ ಮೇಲೆ ಶಿಕ್ಷಕಿಯ ಕ್ರೂರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಅಲ್ಲದೇ ಬಾಲಕನ ತಾಯಿ ಬಿಇಒ ಅವರಿಗೂ ದೂರು ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನು ಶಾಲೆಯಿಂದ ವಜಾಗೊಳಿಸಿದೆ. ಶಿಕ್ಷಕಿ ಆಂಗ್ಲಿನ್ ವಜಾಗೊಂಡವರು.
ಬೆಂಗಳೂರಿನ ನಂದಿನಿ ಲೇಔಟ್ ನ ವೀಣಾ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕಿ ಆಂಗ್ಲಿನ್, 4ನೇ ತರಗತಿ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾಳೆ. ಅಲ್ಲದೇ ಮೈಮೇಲೆ ಬಾಸುಂಡೆ ಬರುವಂತೆ ಹೊಡೆದಿದ್ದಲ್ಲದೇ ಪೋಷಕರಿಗೆ ಹೇಳಿದರೆ ಕತ್ತು ಹಿಸುಕುತ್ತೇನೆ ಎಂದು ಹೆದರಿಸಿದ್ದ ಆರೋಪ ಕೇಳಿಬಂದಿದೆ.
ಮಗನ ಮೈಮೇಲಿರುವ ಬಾಸುಂಡೆ ನೋಡಿ ಶಾಕ್ ಆದ ತಾಯಿ ಮಗನನ್ನು ಪ್ರಶ್ನಿಸಿದ್ದಾಳೆ. ಈ ವೇಳೆ ಬಾಲಕ ತನಗೆ ಟೀಚರ್ ಹೊಡೆಯುತ್ತಿರುವ ಬಗ್ಗೆ ಹೇಳಿದ್ದಾನೆ. ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮೀ ಎಂಬ ಮಹಿಳೆ ಮಗನನ್ನು ಹಾಸ್ಟೇಲ್ ನಲ್ಲಿ ಇಟ್ಟು ನಂದಿನಿ ಲೇಔಟ್ ನಲ್ಲಿರುವ ವೀಣಾ ವಿದ್ಯಾಸಂಸ್ಥೆಗೆ ಸೇರಿಸಿದ್ದರು. ನಾಲ್ಕನೇ ತರಗತಿ ಓದುತ್ತಿದ್ದ ಮಗನನ್ನು ನೋಡಲೆಂದು ತಾಯಿ ಬಂದಾಗ ಮಗನ ಮೈಮೇಲೆ ಬಾಸುಂಡೆ ಕಂಡು ಆಘಾತಕ್ಕೊಳಗಾಗಿದ್ದಾರೆ.
ಅಮ್ಮನನ್ನು ಕಂಡು ಬಾಲಕ ತನಗೆ ಶಿಕ್ಷಕಿ ಹೊಡೆದು ಹಿಂಸಿಸಿದ್ದಾಗಿ ಕಣ್ಣೀರಿಟ್ಟಿದ್ದಾನೆ. ಈ ಬಗ್ಗೆ ಬಾಲಕನ ತಾಯಿ ಲಕ್ಷ್ಮೀ ಶಾಲೆಯ ಹೆಚ್ ಆರ್ ಹಾಗೂ ಮುಖ್ಯ ಶಿಕ್ಷಕರಿಗೆ ದೂರು ನೀಡಿದ್ದಾರೆ. ಆದರೆ ಅವರು ಶಿಕ್ಷಕಿ ಆಂಗ್ಲಿನ್ ಳನ್ನೇ ಸಮರ್ಥನೆ ಮಾಡಿಕೊಂಡಿದ್ದ್ರು. ಇದರಿಂದ ನೊಂದ ತಾಯಿ ಬಿಇಒ ಅವರಿಗೆ ದೂರು ನೀಡಿದ್ದು, ಶಿಕ್ಷಕಿಯನ್ನು ಅಮಾನತುಗೊಳಿಸಿ ಇಲ್ಲವೇ ಶಾಲೆಯ ಮಾನ್ಯತೆ ರದ್ದುಗೊಳಿಸಿ ಎಂದು ಆಗ್ರಹಿಸಿದ್ದರು.
ದೂರು ಪಡೆದುಕೊಂಡಿರುವ ಬಿಇಒ ತಾರಾನಾಥ್, ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ವಿದ್ಯಾರ್ಥಿ ಮೇಲಿನ ಹಲ್ಲೆ ಬಗ್ಗೆ ಶಿಕ್ಷಕಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿ, ಶಿಕ್ಷಕಿ ಆಂಗ್ಲಿನ್ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

