ಬೆಂಗಳೂರು: ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಹಾರ ಮೂಲದ ಮಹಿಳೆ ಮೇಲೆ ಪತಿಯ ಗೆಳೆಯನಿಂದಲೇ ಅತ್ಯಾಚಾರ ನಡೆದಿದೆ.
ಬೈರನಕುಂಟೆಯ ಆರೋಪಿ ಮಹಮ್ಮದ್ ಜಹಾಂಗೀರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಹಿಳೆ ಪತಿ ಟೈಲರ್ ಆಗಿದ್ದು ಆರೋಪಿ ಜಹಾಂಗೀರ್ ಸ್ನೇಹಿತನಾಗಿದ್ದಾನೆ. ಟೈಲರ್ ವೃತ್ತಿಯಲ್ಲಿ ಆತನಿಗೆ ಆರೋಪಿ ಜಹಾಂಗೀರ್ ಸಹಾಯ ಮಾಡುತ್ತಿದ್ದ.
ಮಹಿಳೆಯ ಮನೆಯಿಂದಲೇ ಆರೋಪಿಗೆ ಊಟ ಕಳುಹಿಸಲಾಗುತ್ತಿತ್ತು. ಮಹಿಳೆಯೇ ಊಟ ತೆಗೆದುಕೊಂಡು ಹೋಗುತ್ತಿದ್ದರು. ಆರೋಪಿ ವಾಸವಾಗಿದ್ದ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. 2023ರ ನವೆಂಬರ್ 20ರಂದು ಮಹಿಳೆ ಒಂಟಿಯಾಗಿದ್ದಾಗ ಬಂದ ಆರೋಪಿ ಜಹಾಂಗೀರ್ ಅತ್ಯಾಚಾರ ಎಸಗೆ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಯಾರಿಗಾದರೂ ಹೇಳಿದರೆ ವಿಡಿಯೋ ಬಹಿರಂಗ ಮಾಡುವುದಾಗಿ ಬೆದರಿಸಿದ್ದಾನೆ.
ನಂತರದಲ್ಲಿ ಮಕ್ಕಳ ಅನಾರೋಗ್ಯದ ಕಾರಣ ಮಹಿಳೆ ಬಿಹಾರಕ್ಕೆ ಹೋಗಿದ್ದರು. ಇತ್ತೀಚೆಗೆ ಮಕ್ಕಳೊಂದಿಗೆ ವಾಪಸ್ ಬಂದಿದ್ದಾರೆ. ಫೆಬ್ರವರಿ 10ರಂದು ಮಹಿಳೆ ಬಳಿ ಬಂದಿದ್ದ ಜಹಾಂಗೀರ್ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ವಿರೋಧ ವ್ಯಕ್ತಪಡಿಸಿದಾಗ 5 ಲಕ್ಷ ಕೊಡುವಂತೆ ಬೆದರಿಸಿದ್ದಾನೆ. ಇದೇ ವೇಳೆ ಮನೆಗೆ ಬಂದ ಪತಿ ಪತ್ನಿಯನ್ನು ರಕ್ಷಿಸಿದ್ದು, ನಂತರ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

