HomeIndiaವಿಂಡೋ ಸೀಟ್ ವಿವಾದ: ಸಹಪ್ರಯಾಣಿಕನ ವಿಡಿಯೋ ಮಾಡಿ ಜಾಲತಾಣಕ್ಕೆ ಹಾಕಿದ ಮಹಿಳೆಗೆ ಭಾರಿ ಆಕ್ರೋಶ

ವಿಂಡೋ ಸೀಟ್ ವಿವಾದ: ಸಹಪ್ರಯಾಣಿಕನ ವಿಡಿಯೋ ಮಾಡಿ ಜಾಲತಾಣಕ್ಕೆ ಹಾಕಿದ ಮಹಿಳೆಗೆ ಭಾರಿ ಆಕ್ರೋಶ

ಬಸ್ ಪ್ರಯಾಣದ ವೇಳೆ ವಿಂಡೋ ಸೀಟ್ ನೀಡಲು ನಿರಾಕರಿಸಿದ ಸಹಪ್ರಯಾಣಿಕನ ವಿಡಿಯೋ ಚಿತ್ರೀಕರಿಸಿ ಆತನನ್ನು ಬಹಿರಂಗವಾಗಿ ಟ್ರೋಲ್ ಮಾಡಲು ಯತ್ನಿಸಿದ ಮಹಿಳಾ ಇನ್ಫ್ಲುಯೆನ್ಸರ್ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಬಿಹಾರದಲ್ಲಿ ನಡೆದ ಈ ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಯಾಣದ ಶಿಷ್ಟಾಚಾರ, ಇತರೆ ಪ್ರಯಾಣಿಕರ ಹಕ್ಕು ಮತ್ತು ಅನುಮತಿ ಇಲ್ಲದೆ ವಿಡಿಯೋ ಮಾಡುವ ವಿಷಯಗಳ ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ದರ್ಭಾಂಗಕ್ಕೆ ಪ್ರಯಾಣಿಸುತ್ತಿದ್ದ ಇನ್ಫ್ಲುಯೆನ್ಸರ್, ತಮ್ಮ ಪಕ್ಕದ ಸೀಟಿನಲ್ಲಿದ್ದ ಯುವಕನಿಗೆ ವಿಂಡೋ ಸೀಟ್ ಬಿಟ್ಟುಕೊಡುವಂತೆ ಕೇಳಿದ್ದರು. ಆದರೆ ಆತ ನಿರಾಕರಿಸಿದ್ದಕ್ಕೆ ಕೋಪಗೊಂಡ ಮಹಿಳೆ, ಆತನ ವಿಡಿಯೋ ರೆಕಾರ್ಡ್ ಮಾಡಿ ಜಾಲತಾಣಕ್ಕೆ ಹಂಚಿಕೊಂಡಿದ್ದರು.

ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಸ್‌ನಲ್ಲಿ ಜನರು ಮತ್ತು ವ್ಯಾಪಾರಿಗಳು ಓಡಾಡುವಾಗ ತಮಗೆ ತೊಂದರೆಯಾಗುತ್ತಿದೆ, ಮಹಿಳೆಯರಿಗೆ ವಿಂಡೋ ಸೀಟ್ ನೀಡುವುದು ಸಾಮಾನ್ಯ ಪ್ರಜ್ಞೆ ಎಂದು ಮಹಿಳೆ ವಿಡಿಯೋದಲ್ಲಿ ವಾದಿಸಿದ್ದರು. ಜೊತೆಗೆ ಬಿಹಾರದಲ್ಲಿ ಪ್ರಯಾಣಿಸುವಾಗ ಇಂತಹ ಅನುಭವಗಳು ಸಹಜ ಎಂದು ರಾಜ್ಯದ ಕುರಿತಾಗಿಯೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಡಿಯೋ ಜಾಲತಾಣಗಳಲ್ಲಿ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡ ಬೆನ್ನಲ್ಲೇ ನೆಟ್ಟಿಗರು ಮಹಿಳೆಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಾನು ಕಾಯ್ದಿರಿಸಿದ ಅಥವಾ ಮೊದಲು ಕುಳಿತ ಸೀಟನ್ನು ಬಿಟ್ಟುಕೊಡದಿದ್ದಕ್ಕೆ ಯುವಕನ ವಿಡಿಯೋ ಮಾಡಿ ಸಾರ್ವಜನಿಕವಾಗಿ ಆತನಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ಹಲವರು ಖಂಡಿಸಿದ್ದಾರೆ. ವ್ಯಕ್ತಿಯೊಬ್ಬನ ನಡವಳಿಕೆಯನ್ನು ಇಡೀ ಬಿಹಾರ ರಾಜ್ಯಕ್ಕೆ ಹೋಲಿಸಿ ಮಾತನಾಡಿರುವುದಕ್ಕೂ ಕಟು ಟೀಕೆ ವ್ಯಕ್ತವಾಗಿದೆ.

ಸ್ಪಷ್ಟನೆ ನೀಡಿದ ಇನ್ಫ್ಲುಯೆನ್ಸರ್

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮತ್ತು ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಹಿಳೆ ಮತ್ತೊಂದು ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ. ತಾವು ಕೂಡ ಬಿಹಾರದವರೇ ಆಗಿದ್ದು, ರಾಜ್ಯದ ಸಂಸ್ಕೃತಿಯನ್ನು ನಿಂದಿಸುವ ಉದ್ದೇಶ ತಮಗಿರಲಿಲ್ಲ. ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಹಪ್ರಯಾಣಿಕರ ಅನುಮತಿ ಇಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೆ ಈ ಘಟನೆ ಪ್ರಮುಖ ನಿದರ್ಶನವಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular