ವಿಶ್ವದ ವೈನ್ ರಾಜಧಾನಿ ಎಂದು ಖ್ಯಾತಿ ಪಡೆದಿರುವ ಫ್ರಾನ್ಸ್‌ನ ಬೋರ್ಡೋ ನಗರ ಭೀಕರ ಕಾಡ್ಗಿಚ್ಚಿನ ಆತಂಕ ಎದುರಿಸುತ್ತಿದೆ. ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿ ಆರಂಭವಾದ ಕಾಡ್ಗಿಚ್ಚು ಇದೀಗ ವೇಗವಾಗಿ ಬೋರ್ಡೋ ನಗರದ ಹೊರವಲಯದತ್ತ ಹರಡುತ್ತಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಹೌದು. ವಿಶ್ವದ ವೈನ್ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಫ್ರಾನ್ಸ್‌ನ ಬೋರ್ಡೋ ನಗರ ಭೀಕರ ಕಾಡ್ಗಿಚ್ಚಿನ ಭೀತಿಯನ್ನು ಎದುರಿಸುತ್ತಿದೆ. ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿ ಆರಂಭವಾದ ಬೆಂಕಿ ವೇಗವಾಗಿ ಬೋರ್ಡೋ ನಗರದತ್ತ ವ್ಯಾಪಿಸುತ್ತಿದ್ದು, ಅಗ್ನಿಜ್ವಾಲೆಗಳು ನಗರದಿಂದ ಕೇವಲ 15 ಕಿಲೋಮೀಟರ್ ದೂರಕ್ಕೆ ತಲುಪಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
“ನಮ್ಮ ನಗರದ ಪ್ರವೇಶ ದ್ವಾರದಿಂದ ಕೇವಲ 15 ಕಿಲೋಮೀಟರ್ ದೂರದಲ್ಲೇ ಅಗ್ನಿಜ್ವಾಲೆಗಳು ಕಾಣಿಸುತ್ತಿವೆ” ಎಂದು ಬೋರ್ಡೋ ನಗರದ ಮೇಯರ್ ಆತಂಕ ವ್ಯಕ್ತಪಡಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಗರದ ಹೊರವಲಯದಲ್ಲೇ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಬೋರ್ಡೋ ವಿಶ್ವದ ವೈನ್ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಶತಮಾನಗಳಿಂದಲೂ ಬೋರ್ಡೋ ಮತ್ತು ವೈನ್ ಒಂದಕ್ಕೊಂದು ಪರ್ಯಾಯ ಪದಗಳಾಗಿವೆ. ಇಲ್ಲಿ ಉತ್ಪಾದನೆಯಾಗುವ ವೈನ್‌ಗಳಿಗೆ ವಿಶ್ವದಾದ್ಯಂತ ಅಪಾರ ಬೇಡಿಕೆಯಿದೆ.
ಈ ಪ್ರದೇಶದಲ್ಲಿ ಸುಮಾರು 2,000 ವರ್ಷಗಳ ಹಿಂದಿನ ರೋಮನ್ ಸಾಮ್ರಾಜ್ಯದ ಕಾಲದಿಂದಲೇ ದ್ರಾಕ್ಷಿ ಬೆಳೆ ಬೆಳೆಯಲಾಗುತ್ತಿದೆ. ಇಲ್ಲಿನ ಸಮಶೀತೋಷ್ಣ ಹವಾಮಾನ ದ್ರಾಕ್ಷಿ ಬೆಳೆಗೆ ಅತ್ಯಂತ ಅನುಕೂಲಕರವಾಗಿದ್ದರಿಂದ ರೋಮನ್ನರು ಈ ಪ್ರದೇಶವನ್ನು ವೈನ್ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಿದರು.
ನಂತರ ಇಂಗ್ಲೆಂಡ್‌ನ ಆಡಳಿತಕ್ಕೆ ಬಂದ ಬಳಿಕ, ಇಂಗ್ಲಿಷ್ ಚಾನೆಲ್ ಮೂಲಕ ವೈನ್ ರಫ್ತು ಮತ್ತಷ್ಟು ವೇಗ ಪಡೆದುಕೊಂಡಿತು. ವ್ಯಾಪಾರ, ನದಿ ಮಾರ್ಗಗಳು ಮತ್ತು ಅನುಕೂಲಕರ ಹವಾಮಾನದಿಂದ ಬೋರ್ಡೋ ವಿಶ್ವಪ್ರಸಿದ್ಧ ವೈನ್ ನಗರವಾಗಿ ಬೆಳೆದಿತು. ಇಂದು ಈ ಪ್ರದೇಶದಲ್ಲಿ ಸಾವಿರಾರು ದ್ರಾಕ್ಷಿ ತೋಟಗಳು ಮತ್ತು ವೈನ್ ಎಸ್ಟೇಟ್‌ಗಳಿವೆ. ಜೊತೆಗೆ ವೈನ್ ಇತಿಹಾಸ ಮತ್ತು ನಗರದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ವಿಶ್ವಮಟ್ಟದ ವೈನ್ ಮ್ಯೂಸಿಯಂ ಕೂಡ ಇಲ್ಲಿದೆ.
ಕಳೆದ ಕೆಲವು ದಿನಗಳಿಂದ ಫ್ರಾನ್ಸ್ ಮತ್ತು ಸ್ಪೇನ್ ದೇಶಗಳಲ್ಲಿ ಕಾಡ್ಗಿಚ್ಚಿನ ಅಬ್ಬರ ಮುಂದುವರಿದಿದೆ. ಬೆಂಕಿ ವೇಗವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಫ್ರಾನ್ಸ್‌ನಲ್ಲಿ ಸುಮಾರು 2.20 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇತ್ತ ಸ್ಪೇನ್‌ನಲ್ಲಿ ಕಾಡ್ಗಿಚ್ಚಿನ ಅಪಾಯ ಎದುರಿಸುತ್ತಿರುವ ಸುಮಾರು 75 ಸಾವಿರ ಮಂದಿಗೆ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸರ್ಕಾರ ಎಚ್ಚರಿಕೆ ನೀಡಿದೆ.

