ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ವಾಡಕರ ಎಂಬ ಯುವಕ, ತನ್ನ ಪತ್ನಿಯ ಅನೈತಿಕ ಸಂಬಂಧ ಹಾಗೂ ಆಕೆ ನೀಡಿದ ನಿರಂತರ ಮಾನಸಿಕ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಟ್ಟಿಗೆ ಬಾಳೋಣ ಎಂದು ಪತಿ ಕರೆದರೂ ನಿರಾಕರಿಸಿದ ಪತ್ನಿ, ಮತ್ತೊಬ್ಬ ಪುರುಷನ ಜೊತೆಗಿನ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ವಿಕೃತಿ ಮೆರೆದಿದ್ದಾಳೆ. ‘ನೀನು ಸತ್ತರೂ ನನಗೆ ತೊಂದರೆಯಿಲ್ಲ’ ಎಂದು ಪತ್ನಿ ಹೇಳಿದ ಮಾತಿನಿಂದ ತೀವ್ರವಾಗಿ ನೊಂದ ಪತಿ ನೇಣಿಗೆ ಶರಣಾಗಿದ್ದು, ಇದೀಗ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ಪತ್ನಿಯ ಅನೈತಿಕ ಸಂಬಂಧ ಹಾಗೂ ಮಾನಸಿಕ ಕಿರುಕುಳ ತಾಳಲಾರದೆ ಪತಿ ರಾಘವೇಂದ್ರ ವಾಡಕರ ಎಂಬುವವರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಾಘವೇಂದ್ರ ಅವರು ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಉದ್ಯೋಗದಲ್ಲಿದ್ದರು. ಒಂದು ವಾರದ ಹಿಂದಷ್ಟೇ ಅವರು ದಾಂಡೇಲಿಗೆ ಮರಳಿದ್ದರು. ಆದರೆ ಅವರು ಬಂದ ತಕ್ಷಣ ಪತ್ನಿ ಮೇಘಾ ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದಳು.
ರಾಘವೇಂದ್ರ ಅವರು ಒಟ್ಟಿಗೆ ಸಂಸಾರ ನಡೆಸೋಣ ಎಂದು ಕರೆದರೂ ಪತ್ನಿ ನಿರಾಕರಿಸಿದ್ದಳು. ಅಷ್ಟೇ ಅಲ್ಲದೆ, ಬೇರೊಬ್ಬ ಪುರುಷನ ಜೊತೆಗಿರುವ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡು ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು. ‘ನೀನು ಸತ್ತರೂ ನನಗೆ ತೊಂದರೆಯಿಲ್ಲ’ ಎಂದು ಕ್ರೂರವಾಗಿ ಪ್ರತಿಕ್ರಿಯಿಸಿದ್ದಳು. ಇದರಿಂದ ಮನನೊಂದ ರಾಘವೇಂದ್ರ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

