ಮಹಬೂಬಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಡೋರ್ನಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಲನ ಮೂಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಗಂಡನ ಸಾವನ್ನು ಅಪಘಾತದಂತೆ ಬಿಂಬಿಸಿ ಹತ್ಯೆ ಮಾಡಬೇಕು, ಇಲ್ಲದಿದ್ದರೆ ತಾನೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಿಯಕರನಿಗೆ ಕಳುಹಿಸಿದ ವಾಟ್ಸ್ಆ್ಯಪ್ ಸಂದೇಶವೇ ಪ್ರಕರಣದ ರಹಸ್ಯ ಬಯಲು ಮಾಡಿದೆ. ವಾಟ್ಸ್ಆ್ಯಪ್ ಹಾಗೂ ಇನ್ಸ್ಟಾಗ್ರಾಂ ಚಾಟ್ಗಳ ಪ್ರತಿಗಳನ್ನು ಗಂಡ ಪೊಲೀಸರಿಗೆ ಸಲ್ಲಿಸಿದ್ದರಿಂದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಪೊಲೀಸರ ಮಾಹಿತಿ ಪ್ರಕಾರ, ಡೋರ್ನಕಲ್ ಮಂಡಲದ ಚಿಲುಕೋಡು ಗ್ರಾಮದ ಗಾದೆ ರಾಜೇಶ್ವರರಾವ್ ಅವರು ಪ್ರಸ್ತುತ ಖಮ್ಮಂ ಜಿಲ್ಲೆಯ ಸಾಯಿಪ್ರಭಾತ್ ನಗರದಲ್ಲಿ ವಾಸವಾಗಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. 2016ರಲ್ಲಿ ಸೂರ್ಯಾಪೇಟ ಜಿಲ್ಲೆಯ ಮೋತೆ ಮಂಡಲದ ಯುವತಿಯೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.
ಜುಲೈ 27ರಂದು ಊಟಕ್ಕಾಗಿ ಮನೆಗೆ ಬಂದಿದ್ದ ರಾಜೇಶ್ವರರಾವ್ ತಮ್ಮ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿ ಇರುವುದನ್ನು ಕಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ವಿಷಯವನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಲು ನಿರ್ಧರಿಸಿದ್ದರು. ಮರುದಿನ ತಮ್ಮ ಅಣ್ಣನನ್ನು ಕರೆತರಲು ಹೋಗಿದ್ದ ವೇಳೆ ಅನುಮಾನಿತ ವ್ಯಕ್ತಿಯೊಬ್ಬ ತನ್ನನ್ನು ಹಿಂಬಾಲಿಸಿದ್ದಾನೆ ಎಂದು ಆರೋಪಿಸಿದ್ದಾರೆ.ನಂತರ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಪ್ರಿಯಕರನೊಂದಿಗೆ ನಡೆಸಿದ ಚಾಟಿಂಗ್ ಬೆಳಕಿಗೆ ಬಂದಿದೆ. ಆ ಸಂದೇಶಗಳಲ್ಲಿ, ಗಂಡನನ್ನು ಮನೆಯಲ್ಲಲ್ಲ, ಹೊರಗೆ ಅಪಘಾತದಂತೆ ಕಾಣುವ ರೀತಿಯಲ್ಲಿ ಕೊಲೆ ಮಾಡಬೇಕು ಎಂದು ಪ್ರಿಯಕರನ ಮೇಲೆ ಒತ್ತಡ ಹೇರಿರುವ ವಿಷಯವಿದೆ ಎಂದು ರಾಜೇಶ್ವರರಾವ್ ಪೊಲೀಸರಿಗೆ ತಿಳಿಸಿದ್ದಾರೆ.
ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿರುವ ಅವರು, ಪತ್ನಿ ಹಾಗೂ ಆಕೆಯ ಪ್ರಿಯಕರ ಪುರಿಮೆಟ್ಲ ಸೈದುಲು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.ದೂರಿನ ಆಧಾರದ ಮೇಲೆ ಡೋರ್ನಕಲ್ ಪೊಲೀಸರು ಜೀರೋ ಎಫ್ಐಆರ್ ದಾಖಲಿಸಿ ಪ್ರಕರಣವನ್ನು ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ. ಬಳಿಕ ರಾಜೇಶ್ವರರಾವ್ ಅಲ್ಲಿಯೂ ಮತ್ತೊಮ್ಮೆ ದೂರು ದಾಖಲಿಸಿದ್ದಾರೆ.ದೂರು ಸ್ವೀಕರಿಸಿರುವ ಗ್ರಾಮೀಣ ಪೊಲೀಸರು, ಪ್ರಕರಣದ ತನಿಖೆ ಆರಂಭಿಸಿದ್ದು, ಸಲ್ಲಿಸಲಾದ ವಾಟ್ಸ್ಆ್ಯಪ್ ಹಾಗೂ ಇನ್ಸ್ಟಾಗ್ರಾಂ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

