ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಭಾರೀ ಸಂಚಲನ ಮೂಡಿದ್ದು, ಸಚಿವ ಸಂಪುಟದ ಪ್ರಭಾವಿ ನಾಯಕರಲ್ಲೊಬ್ಬರಾದ ರಾಮಲಿಂಗ ರೆಡ್ಡಿ ಅವರು ತಮ್ಮ ು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ದೊಡ್ಡ ಆಘಾತ ನೀಡಿದ್ದಾರೆ. ಖಾತೆ ಹಂಚಿಕೆಯಾದ ಮರುದಿನವೇ ಈ ರಾಜೀನಾಮೆಯ ನಿರ್ಧಾರ ಹೊರಬಿದ್ದಿದ್ದು, ಹೊಸ ಸರ್ಕಾರದಲ್ಲಿ ಇದು ತಳಮಳವನ್ನು ಸೃಷ್ಟಿಸಿದೆ.
ರಾಮಲಿಂಗ ರೆಡ್ಡಿ ಅವರ ಅಸಮಾಧಾನಕ್ಕೆ ಮುಖ್ಯ ಕಾರಣ ಬೆಂಗಳೂರು ನಗರ ಅಭಿವೃದ್ಧಿ ಖಾತೆ ಅವರಿಗೆ ಸಿಗದಿರುವುದು. ಪಕ್ಷದ ಹಿರಿಯ ನಾಯಕರಾಗಿದ್ದರೂ, ನಿರೀಕ್ಷಿತ ಖಾತೆ ಲಭಿಸದಿರುವುದು ಮತ್ತು ಪಕ್ಷದ ವರಿಷ್ಠರ ನಿರ್ಧಾರದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ರಾತ್ರಿ ನೂತನ ಸಚಿವರಿಗೆ ಡಿಕೆಶಿ ಖಾತೆಗಳನ್ನು ಹಂಚಿಕೆ ಮಾಡಿದ್ದರು. ರಾಮಲಿಂಗಾರೆಡ್ಡಿಯವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿತ್ತು. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈ ತಪ್ಪಿದ ಹಿನ್ನೆಲೆಯಲ್ಲಿ ಗುರುವಾರವೇ ರಾಜೀನಾಮೆ ನೀಡುವ ಸುಳಿವನ್ನು ರಾಮಲಿಂಗಾರೆಡ್ಡಿ ನೀಡಿದ್ದರು.
ಶುಕ್ರವಾರ ಬೆಳಿಗ್ಗೆಯೇ ನಗರದ ಕೋರಮಂಗಲದಲ್ಲಿರುವ ಅವರ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿಯವರು, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ತಮ ಅಸಮಾಧಾನವನ್ನು ಬಹಿರಂಗಪಡಿಸಿರುವ ರಾಮಲಿಂಗ ರೆಡ್ಡಿ, ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ರವಾನಿಸಿದ್ದಾರೆ. ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸಿ ಹಿರಿಯ ನಾಯಕರೊಬ್ಬರು ಬಹಿರಂಗವಾಗಿ ರಾಜೀನಾಮೆ ನೀಡಿರುವುದು, ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟುಮಾಡಿದೆ.
ಮೊದಲ ವಿಕೆಟ್ ಪತನ
ಈ ಬೆಳವಣಿಗೆಯನ್ನು ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಸರ್ಕಾರದ ಮೊದಲ ವಿಕೆಟ್ ಪತನ ಎಂದು ಬಣ್ಣಿಸಲಾಗುತ್ತಿದೆ. ಇದು ಸಂಪುಟದಲ್ಲಿರುವ ಇತರ ಅತೃಪ್ತ ನಾಯಕರ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದು ಸದ್ಯದ ಕುತೂಹಲ. ರಾಮಲಿಂಗ ರೆಡ್ಡಿ ಅವರಂತಹ ಹಿರಿಯ ನಾಯಕರ ನಿರ್ಗಮನವು ಪಕ್ಷದ ಆಂತರಿಕ ಭಿನ್ನಮತವನ್ನು ಮತ್ತೊಮೆ ಜಗಜ್ಜಾಹೀರು ಮಾಡಿದೆ. ಒಂದು ವೇಳೆ ಈ ಸಮಸ್ಯೆಯನ್ನು ತಕ್ಷಣವೇ ಶಮನಗೊಳಿಸಲು ಪಕ್ಷದ ಹೈಕಮಾಂಡ್ ಮುಂದಾಗದಿದ್ದರೆ, ಮುಂಬರುವ ದಿನಗಳಲ್ಲಿ ಸರ್ಕಾರದ ಸ್ಥಿರತೆಯ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ರಾಜೀನಾಮೆಗೆ ಕಾರಣ?
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನೀಡುವುದಾಗಿ ಭರವಸೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಆದರೆ, ಆ ಖಾತೆಯನ್ನು ನೀಡದಿರುವುದು ಅವರಿಗೆ ತೀವ್ರ ಬೇಸರ ತಂದಿದೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ನಿಲುವು: ತಾವು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಕೇವಲ ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ನಲ್ಲೇ ಇರುತ್ತೇನೆ
ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ. 53 ವರ್ಷ ಕಾಂಗ್ರೆಸ್ಗೆ ಕೆಲಸ ಮಾಡಿದ್ದೇನೆ, ಇನ್ನು ಮುಂದೆಯೂ ಶಾಸಕನಾಗಿಯೇ ಮುಂದುವರಿಯುತ್ತೇನೆ. ಯಾರ ಮೇಲೂ ಬೇಸರ ಇಲ್ಲ. ಹೈಕಮಾಂಡ್ ಮೇಲೂ ಇಲ್ಲ, ಡಿ ಕೆ ಶಿವಕುಮಾರ್ ಮೇಲೂ ಬೇಸರ ಇಲ್ಲ ಎಂದಿದ್ದಾರೆ.
ಜಲಸಂಪನೂಲ ಖಾತೆ ನೀಡಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ರೆಡ್ಡಿ ಬೆಂಗಳೂರು ಅಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದರು. ಆದರೆ ಹೈಕಮಾಂಡ್ ನಿರಾಕರಿಸಿತ್ತು. ಇದರಿಂದ ಬೇಸತ್ತು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹಿಂದೆಯೂ ಬೆಂಗಳೂರು ನಗರಾಭಿವೃದ್ಧಿ ಕೊಡುತ್ತೇವೆ ಎಂದು ನಂತರ ಸಾರಿಗೆ ಇಲಾಖೆ ಕೊಟ್ಟಿದ್ದರು. ಆ ಬಳಿಕ ಡಿಕೆಶಿ ಹಾಗೂ ಡಿ ಕೆ ಸುರೇಶ್ ರಾಮಲಿಂಗಾ ರೆಡ್ಡಿ ಮನೆಗೆ ಬಂದು, ಸಂಜೆ 4 ಗಂಟೆಯವರೆಗೂ ಇದ್ದು, ಎರಡುವರೇ ವರ್ಷದ ಬಳಿಕ ಸರಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಕೊಡುವುದಾಗಿ ಅವರೇ ಹೇಳಿದ್ದರು. ನಾನೇನು ಕೇಳಿರಲಿಲ್ಲ. ಅವರಾಗಿಯೇ ಹೇಳಿ, ಈಗ ಮಾತಿಗೆ ತಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಮಲಿಂಗಾ ರೆಡ್ಡಿ ಅವರು ಈ ನಿರ್ಧಾರವನ್ನು ಸ್ವತಃ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದು, ಈ ವಿಷಯದಲ್ಲಿ ಯಾವುದೇ ಮಾತುಕತೆಗೆ ಒಳಪಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಿರೋಧ ಪಕ್ಷಗಳು ಈ ಅವಕಾಶವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗುತ್ತಿದ್ದು, ಕಾಂಗ್ರೆಸ್ ನಾಯಕತ್ವವು ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ.
ಹಿರಿಯ ಕಾಂಗ್ರೆಸ್ ಕಟ್ಟಾಳು
ಬೆಂಗಳೂರಿನಲ್ಲಿಯೇ ಐದು ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಇವರು, ಮೃದು ಸ್ವಭಾವದ ಮತ್ತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ನಾಯಕರಾಗಿ ಹೆಸರುವಾಸಿಯಾಗಿದ್ದಾರೆ. ರಾಮಲಿಂಗ ರೆಡ್ಡಿಯವರ ರಾಜಕೀಯ ಜೀವನ ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾಯಿತು.
(1970ರ ದಶಕ): 1973-74ರಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದರು. ಎನ್ಎಸ್ಯುಐ ಮೂಲಕ ಕಾಂಗ್ರೆಸ್ ಸಂಘಟನೆಗೆ ಸೇರಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸ್ಥಳೀಯ ಸಂಸ್ಥೆಯ ರಾಜಕಾರಣ :1983ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕಾಪೆರ್Çರೇಟರ್ ಆಗಿ ಆಯ್ಕೆಯಾಗುವ ಮೂಲಕ ನೇರ ಚುನಾವಣಾ ರಾಜಕಾರಣಕ್ಕೆ ಅಡಿಯಿಟ್ಟರು.1989ರಲ್ಲಿ ಮೊದಲ ಬಾರಿಗೆ ಜಯನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಸೋಲಿಲ್ಲದ ಸರದಾರನಂತೆ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು ಅವರ ರಾಜಕೀಯ ಶಕ್ತಿಯ ನಿದರ್ಶನವಾಗಿದೆ.
ಜಯನಗರ ಕ್ಷೇತ್ರ: 1989, 1994, 1999, 2004 (4 ಬಾರಿ). ಬಿಟಿಎಂ ಲೇಔಟ್ ಕ್ಷೇತ್ರ: 2008, 2013, 2018, 2023 (ಸತತವಾಗಿ ಗೆಲುವು) ಸಾಧಿಸಿದ್ದರು.
ವಿವಿಧ ಮುಖ್ಯಮಂತ್ರಿಗಳ ಸಂಪುಟದಲ್ಲಿ ಅತ್ಯಂತ ಪ್ರಭಾವಿ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ವೀರಪ್ಪ ಮೊಯಿಲಿ ಅವರ ಸರ್ಕಾರದಲ್ಲಿ ಹಣಕಾಸು ಮತ್ತು ಕೈಗಾರಿಕೆ,ಎಸ್. ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಮತ್ತು ಆಹಾರ ನಾಗರಿಕ ಸರಬರಾಜು, ಎನ್. ಧರಂಸಿಂಗ್ ಅವರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಅತ್ಯಂತ ಪ್ರಮುಖವಾದ ಸಾರಿಗೆ ಮತ್ತು ಗೃಹ ಇಲಾಖೆಯ ಖಾತೆಗಳನ್ನು ನಿಭಾಯಿಸಿದ್ದರು. ಜೊತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿಯೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು.
ಪಕ್ಷನಿಷ್ಠೆ
2019ರ ರಾಜಕೀಯ ವಿದ್ಯಮಾನಗಳ ಸಂದರ್ಭದಲ್ಲಿ ಅನೇಕ ನಾಯಕರು ಪಕ್ಷ ತೊರೆದಾಗಲೂ, ರಾಮಲಿಂಗ ರೆಡ್ಡಿ ಅವರು ಅಚಲವಾಗಿ ಕಾಂಗ್ರೆಸ್ ಪಕ್ಷದಲ್ಲೇ ಉಳಿದುಕೊಂಡು ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದ್ದರು. ಅವರ ಪುತ್ರಿ ಸೌಮ್ಯ ರೆಡ್ಡಿ ಸಹ ಜಯನಗರ ಕ್ಷೇತ್ರದ ಶಾಸಕಿಯಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕಗಳ ಕಾಲ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಮಲಿಂಗ ರೆಡ್ಡಿ ಅವರು ಕೇವಲ ಚುನಾವಣೆ ಗೆಲ್ಲುವ ನಾಯಕರಾಗಿ ಅಷ್ಟೆ? ಅಲ್ಲದೆ, ಆಡಳಿತಾತ್ಮಕವಾಗಿ ಅನುಭವಿ ನಾಯಕರಾಗಿ ಕರ್ನಾಟಕದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

