ಬೆಂಗಳೂರು : ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೇ?” ಎಂದು ಜೆಡಿಎಸ್ ಟ್ವೀಟ್ ನಲ್ಲಿ ಲೇವಡಿ ಮಾಡಿದೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿಯಾಗಿದೆ. ಸಚಿವರು ಮತ್ತು ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಸರ್ಕಾರಕ್ಕೆ ಭಯವೇಕೆ? ಎಂದು ಪ್ರಶ್ನಿಸಿದೆ.
ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಮಾಜವಾದಿ ಮುಖವಾಡ ತೊಟ್ಟ ಸರ್ಕಾರಕ್ಕೆ ಇಂದು ನಡುಕ ಶುರುವಾಗಿದೆ. ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಾಗಿದೆ.ಸರ್ಕಾರದ ಹಗರಣಗಳು, ಕಮಿಷನ್ ದಂಧೆ, ಟ್ರಾನ್ಸ್‌ಫರ್ ದಂಧೆಗಳು ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯಲು ಸರ್ಕಾರ ಮುಂದಾಗಿದೆ. ಇದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲೆ ನಡೆಸುತ್ತಿರುವ ಪ್ರಹಾರವಾಗಿದೆ.ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದನ್ನು ಬಿಟ್ಟು, ಜನರಿಗೆ ಪಾರದರ್ಶಕವಾದ ಆಡಳಿತ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಸವಾಲು ಹಾಕಿದೆ.

