ಬೆಂಗಳೂರು- ದೇವನಹಳ್ಳಿಯ ಸಾಮಾನ್ಯ ಕುಟುಂಬವೊಂದರಲ್ಲಿ ಬೆಳೆದ ಕನ್ನಡತಿಯೊಬ್ಬರು ಇಂದು ಜಾಗತಿಕ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಕರ್ನಾಟಕದ ಹೆಮ್ಮೆ ಹೆಚ್ಚಿಸಿದ್ದಾರೆ.
ಬೆಂಗಳೂರಿನ ರಮ್ಯಾ ಮಂಜುನಾಥ್ ಅಂಚೆ ಅವರು ನಾಸಾದ (NASA) 20 ಮಿಲಿಯನ್ ಡಾಲರ್ ಮೌಲ್ಯದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯ ನೇತೃತ್ವ ವಹಿಸಿಕೊಂಡಿದ್ದು, ನಕ್ಷತ್ರಗಳ ನಡುವಿನ ಸೂಕ್ಷ್ಮ ಧೂಳಿನ ಕಣಗಳ ಅಧ್ಯಯನಕ್ಕಾಗಿ ವಿಶೇಷ ದೂರದರ್ಶಕ ನಿರ್ಮಿಸುತ್ತಿದ್ದಾರೆ
ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸ್ಟೀವರ್ಡ್ ವೀಕ್ಷಣಾಲಯದಲ್ಲಿ ಸಹಾಯಕ ಸಂಶೋಧನಾ ಪ್ರಾಧ್ಯಾಪಕರಾಗಿರುವ ರಮ್ಯಾ, ನಾಸಾದ ‘ಆಸ್ಟ್ರೋಫಿಸಿಕ್ಸ್ ಪಯನಿಯರ್ಸ್’ ಕಾರ್ಯಕ್ರಮದಡಿ ಆಯ್ಕೆಯಾಗಿರುವ ‘PUFFINS’ (Features in the Interstellar Dust) ಯೋಜನೆಯ ಪ್ರಧಾನ ಸಂಶೋಧಕರಾಗಿದ್ದಾರೆ.
ಈ ಯೋಜನೆಗೆ ನಾಸಾ 20 ಮಿಲಿಯನ್ ಡಾಲರ್ ಅನುದಾನ ನೀಡಿದ್ದು, 2030ರ ವೇಳೆಗೆ ದೂರದರ್ಶಕವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಗುರಿ ಹೊಂದಲಾಗಿದೆ.
ಕಲಿಯುವ ಕುತೂಹಲಕ್ಕೆ ಪ್ರೇರಣೆಯಾದ ಕೊಲಂಬಿಯಾ ದುರಂತ
2003ರ ಫೆಬ್ರವರಿ 1ರಂದು ಅಮೆರಿಕದ ಕೊಲಂಬಿಯಾ ಬಾಹ್ಯಾಕಾಶ ನೌಕೆ ಭೂಮಿಗೆ ಮರಳುವ ಸಂದರ್ಭದಲ್ಲಿ ಸಂಭವಿಸಿದ ದುರಂತದಲ್ಲಿ ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಮಂದಿ ಗಗನಯಾತ್ರಿಗಳು ಮೃತಪಟ್ಟಿದ್ದರು.
ಈ ಘಟನೆ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತ್ತು. ಆಗ ಹದಿಹರೆಯದಲ್ಲಿದ್ದ ರಮ್ಯಾ ಅವರ ಮೇಲೂ ಈ ದುರಂತ ಗಾಢ ಪರಿಣಾಮ ಬೀರಿತ್ತು.
ಬಾಹ್ಯಾಕಾಶದಲ್ಲಿ ಇಂತಹ ಘಟನೆಗಳು ಏಕೆ ಸಂಭವಿಸುತ್ತವೆ? ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಇಂತಹ ಅಪಾಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬ ಪ್ರಶ್ನೆಗಳು ಅವರಲ್ಲಿ ಸಂಶೋಧನಾ ಆಸಕ್ತಿಯನ್ನು ಬೆಳೆಸಿದವು. ಇದೇ ಕುತೂಹಲ ಮುಂದಿನ ದಿನಗಳಲ್ಲಿ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಅಧ್ಯಯನ ನಡೆಸಲು ಪ್ರೇರಣೆಯಾಯಿತು.
ದೇವನಹಳ್ಳಿಯಲ್ಲಿ ಆರಂಭವಾದ ಶಿಕ್ಷಣದ ಪಯಣ
ರಮ್ಯಾ ಅವರು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ನಿವೃತ್ತರಾದ ಖ್ಯಾತ ಸೂಕ್ಷ್ಮಜೀವಶಾಸ್ತ್ರಜ್ಞ ಎ. ಮಂಜುನಾಥ್ ಅವರ ಪುತ್ರಿ. ತಂದೆಯೇ ಮಣ್ಣಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಯಲ್ಲಿ ವಿಜ್ಞಾನ, ಸಂಶೋಧನೆ ಮತ್ತು ಹೊಸ ಆವಿಷ್ಕಾರಗಳ ಕುರಿತು ನಿರಂತರ ಚರ್ಚೆಗಳು ನಡೆಯುತ್ತಿದ್ದವು. ಈ ವಾತಾವರಣವೇ ಬಾಲ್ಯದಿಂದಲೇ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿತು.
ದೇವನಹಳ್ಳಿಯ ಆಕ್ಸ್ಫರ್ಡ್ ಇಂಗ್ಲಿಷ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆದ ಅವರು, ಬೆಂಗಳೂರಿನ ಎಂಇಎಸ್ ವಿದ್ಯಾಸಾಗರ್ ಪ್ರೊ. ಎಂಪಿಎಲ್ ಶಾಸ್ತ್ರಿ ಪಿಯು ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದರು.
ಬಳಿಕ ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದರು.
ಆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮ ವೇಗವಾಗಿ ಬೆಳೆಯುತ್ತಿತ್ತು. ಬಹುತೇಕ ಎಂಜಿನಿಯರಿಂಗ್ ಪದವೀಧರರು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಆಸಕ್ತಿ ತೋರುತ್ತಿದ್ದರು. ಆದರೆ ರಮ್ಯಾ ಮಾತ್ರ ಉದ್ಯೋಗದ ಆಕರ್ಷಕ ವೇತನಕ್ಕಿಂತ ಸಂಶೋಧನೆಯ ಹಾದಿಯನ್ನು ಆಯ್ಕೆ ಮಾಡಿಕೊಂಡರು.
ಭಾರತದಲ್ಲೇ ಉನ್ನತ ಸಂಶೋಧನೆ; ಬಳಿಕ ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಸಾಧನೆ
2012ರಲ್ಲಿ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ಸೇರಿದ್ದ ರಮ್ಯಾ, ಪ್ರೊ. ಜಿ.ಸಿ. ಅನುಪಮಾ ಅವರ ಮಾರ್ಗದರ್ಶನದಲ್ಲಿ ಖಗೋಳ ಉಪಕರಣಗಳ ಕ್ಷೇತ್ರದಲ್ಲಿ ಸಮಗ್ರ ಎಂಟೆಕ್-ಪಿಎಚ್ಡಿ ಅಧ್ಯಯನ ನಡೆಸಿದರು.
2020-21ರಲ್ಲಿ ಪುಣೆಯ ಇಂಟರ್-ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ನಲ್ಲಿ ಪೋಸ್ಟ್ಡಾಕ್ಟರಲ್ ಫೆಲೋಶಿಪ್ ಪೂರ್ಣಗೊಳಿಸಿದರು.
2021ರಲ್ಲಿ ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯಕ್ಕೆ ತೆರಳಿದ ಅವರು, ಸ್ಟೀವರ್ಡ್ ವೀಕ್ಷಣಾಲಯದಲ್ಲಿ ಸಂಶೋಧನೆಯನ್ನು ಮುಂದುವರಿಸಿದರು. ತಮ್ಮ ಸಂಶೋಧನಾ ವೃತ್ತಿಜೀವನದ ಆರಂಭಿಕ ಹಂತದಲ್ಲೇ ನಾಸಾದ ಮಹತ್ವದ ಯೋಜನೆಯ ಪ್ರಸ್ತಾವನೆಯನ್ನು ಮುನ್ನಡೆಸಿ ಅನುದಾನ ಪಡೆಯುವಲ್ಲಿ ಯಶಸ್ವಿಯಾಗಿರುವುದು ಅವರ ಸಾಧನೆಯ ಮಹತ್ವವನ್ನು ಹೆಚ್ಚಿಸಿದೆ.
ಏನಿದು PUFFINS ಯೋಜನೆ? ಧೂಳಿನ ಕಣಗಳ ಅಧ್ಯಯನ ಏಕೆ ಮುಖ್ಯ?
ನಕ್ಷತ್ರಗಳ ನಡುವಿನ ಅಂತರಿಕ್ಷದಲ್ಲಿ ಅತ್ಯಂತ ಸೂಕ್ಷ್ಮವಾದ ಧೂಳಿನ ಕಣಗಳು ತೇಲಾಡುತ್ತಿರುತ್ತವೆ. ಇವು ಸಾಮಾನ್ಯ ದೂರದರ್ಶಕಗಳಿಗೆ ನೇರವಾಗಿ ಗೋಚರಿಸುವುದಿಲ್ಲ.
ಸರಿಸುಮಾರು ಸಾಮಾನ್ಯ ಶೀತಕ್ಕೆ ಕಾರಣವಾಗುವ ವೈರಸ್ನ ಗಾತ್ರದಷ್ಟು ಸೂಕ್ಷ್ಮವಾಗಿರುವ ಈ ಕಣಗಳು ಬ್ರಹ್ಮಾಂಡದ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.
ನಕ್ಷತ್ರಗಳಿಂದ ಹೊರಹೊಮ್ಮುವ ಬೆಳಕು ಗ್ಯಾಲಕ್ಸಿಯಲ್ಲಿ ಹೇಗೆ ಚಲಿಸುತ್ತದೆ, ಧೂಳಿನ ಕಣಗಳು ಬೆಳಕಿನ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ, ಹೊಸ ನಕ್ಷತ್ರಗಳು ಮತ್ತು ಗ್ರಹಗಳ ರಚನೆಗೆ ಇವು ಹೇಗೆ ಕೊಡುಗೆ ನೀಡುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಈ ಸಂಶೋಧನೆಯ ಪ್ರಮುಖ ಉದ್ದೇಶವಾಗಿದೆ.
ಇದಕ್ಕಾಗಿ PUFFINS ಯೋಜನೆಯಲ್ಲಿ ‘ಅಲ್ಟ್ರಾವಯಲೆಟ್ ಸ್ಪೆಕ್ಟ್ರೋಪೋಲಾರಿಮೆಟ್ರಿ’ (UV Spectropolarimetry) ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ನೇರಳಾತೀತ ಬೆಳಕಿನ ಧ್ರುವೀಕರಣದ ಮಾಪನದ ಮೂಲಕ ಅಂತರತಾರಾ ಧೂಳಿನ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗುತ್ತದೆ. ಕಳೆದ ಹಲವು ದಶಕಗಳಿಂದ ಬಾಹ್ಯಾಕಾಶದಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಇಂತಹ ಅಧ್ಯಯನ ನಡೆಸುವ ಪ್ರಯತ್ನಗಳು ನಡೆದಿರಲಿಲ್ಲ ಎಂಬುದು ಯೋಜನೆಯ ವಿಶೇಷತೆ.
2030ರಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆ
PUFFINS ಐದು ವರ್ಷಗಳ ಸಂಶೋಧನಾ ಯೋಜನೆಯಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ವಿಶೇಷ ದೂರದರ್ಶಕವನ್ನು ವಿನ್ಯಾಸಗೊಳಿಸಿ ನಿರ್ಮಿಸುವ ಕಾರ್ಯ ನಡೆಯಲಿದ್ದು, 2030ರಲ್ಲಿ ಅದನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಉದ್ದೇಶವಿದೆ.
ಸುಮಾರು 40 ವಿಜ್ಞಾನಿಗಳು, ಎಂಜಿನಿಯರ್ಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪೋಸ್ಟ್ಡಾಕ್ಟರಲ್ ಸಂಶೋಧಕರು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಜನೆಯ ಪ್ರಧಾನ ಸಂಶೋಧಕರಾಗಿ ರಮ್ಯಾ ಸಂಪೂರ್ಣ ವೈಜ್ಞಾನಿಕ ಸಂಶೋಧನಾ ಕಾರ್ಯಕ್ಕೆ ನೇತೃತ್ವ ವಹಿಸಿದ್ದಾರೆ.
ತಾವು ವಿನ್ಯಾಸಗೊಳಿಸಲು ನೆರವಾದ ಉಪಕರಣಗಳಲ್ಲಿ ಬಾಹ್ಯಾಕಾಶಕ್ಕೆ ಉಡಾವಣೆಯಾಗಿ ಕಾರ್ಯನಿರ್ವಹಿಸಲಿರುವ ಮೊದಲ ಉಪಕರಣ ಇದಾಗಲಿದೆ ಎಂಬುದು ರಮ್ಯಾ ಅವರ ಪಾಲಿಗೆ ವಿಶೇಷ ಹೆಮ್ಮೆಯ ಸಂಗತಿಯಾಗಿದೆ.
ಕರ್ನಾಟಕದ ಪ್ರತಿಭೆಗೆ ಜಾಗತಿಕ ಮನ್ನಣೆ
ಒಂದು ಕಾಲದಲ್ಲಿ ದೇವನಹಳ್ಳಿಯ ಶಾಲೆಯಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಬೆಳೆಸಿಕೊಂಡಿದ್ದ ವಿದ್ಯಾರ್ಥಿನಿ, ಇಂದು ನಾಸಾದ ಕೋಟ್ಯಂತರ ಡಾಲರ್ ಮೌಲ್ಯದ ಬಾಹ್ಯಾಕಾಶ ಸಂಶೋಧನಾ ಯೋಜನೆಯ ನೇತೃತ್ವ ವಹಿಸಿರುವುದು ಗಮನಾರ್ಹ ಸಾಧನೆ. ಸಾಫ್ಟ್ವೇರ್ ಉದ್ಯೋಗದ ಆಕರ್ಷಣೆಗೆ ಒಳಗಾಗದೆ ಸಂಶೋಧನೆಯನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ಅವರ ನಿರ್ಧಾರ ಇಂದು ಜಾಗತಿಕ ಮಟ್ಟದಲ್ಲಿ ಫಲ ನೀಡಿದೆ.
ಕಲ್ಪನಾ ಚಾವ್ಲಾ ಅವರ ಬಾಹ್ಯಾಕಾಶ ಪಯಣದಿಂದ ಪ್ರೇರಣೆ ಪಡೆದ ರಮ್ಯಾ, ಇದೀಗ ಬ್ರಹ್ಮಾಂಡದ ಅಜ್ಞಾತ ರಹಸ್ಯಗಳನ್ನು ಅರಿಯುವ ಸಂಶೋಧನೆಯ ಭಾಗವಾಗಿದ್ದಾರೆ. ದೇವನಹಳ್ಳಿಯಿಂದ ಆರಂಭವಾದ ಅವರ ಪಯಣ ನಾಸಾದ ಬಾಹ್ಯಾಕಾಶ ಯೋಜನೆಯವರೆಗೆ ತಲುಪಿರುವುದು ಕರ್ನಾಟಕದ ಯುವ ವಿಜ್ಞಾನಾಸಕ್ತರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ, ದೊಡ್ಡ ಸ್ಫೂರ್ತಿಯಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರತಿಭೆ, ನಿರಂತರ ಪರಿಶ್ರಮ ಮತ್ತು ಪ್ರಶ್ನಿಸುವ ಮನೋಭಾವವೇ ಮುಖ್ಯ ಎಂಬುದಕ್ಕೆ ರಮ್ಯಾ ಮಂಜುನಾಥ್ ಅಂಚೆ ಅವರ ಸಾಧನೆ ಸಾಕ್ಷಿಯಾಗಿದೆ.

