ಬೆಂಗಳೂರು: ಸ್ಟ್ಯಾಂಡಪ್ ಕಾಮಿಡಿಯನ್ ಶೋ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸರನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದೆ. ವಿಚಾರಣೆಗೆ ಎಸಿಪಿ ಮತ್ತು ಡಿಸಿಪಿ ಖುದ್ದು ಹಾಜರಾಗುವಂತೆ ಸೂಚಿಸಿದೆ. ಒಂದು ವೇಳೆ ಅವರು ಹಾಜರಾಗದಿದ್ರೆ ಪೊಲೀಸ್ ಕಮಿಷನರ್‌ಗೆ ಸಮನ್ಸ್ ನೀಡುವುದಾಗಿ ಎಚ್ಚರಿಕೆ ನೀಡಿದೆ.
ವೈಟ್‌ಫೀಲ್ಡ್‌ನಲ್ಲಿ ಕುನಾಲ್ ಕಾಮ್ರಾ ಶೋ ಆಯೋಜಿಸಿದ್ದ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಶೋ ರದ್ದು ಮಾಡುವಂತೆ ಮೋಹನ್ ಗೌಡ ಅನ್ನೋರು ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಮನವಿ ನಂತರ ಕುನಾಲ್ ಕಾಮ್ರಾ ಶೋ ರದ್ದು ಮಾಡಲಾಗಿತ್ತು. ರದ್ದಾದ ವಿಚಾರವನ್ನು ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದ ಮೋಹನ್ ಗೌಡರ ವಿರುದ್ಧ, ಈ ಟ್ವೀಟ್ ಆಧರಿಸಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.
ತಡರಾತ್ರಿ 2 ಗಂಟೆಗೆ ಎಫ್‌ಐಆರ್ ದಾಖಲಿಸಿ, ಅದೇ ದಿನ ಬೆಳಗ್ಗೆ ಉಡುಪಿಯಲ್ಲಿ ಮೋಹನ್ ಗೌಡರನ್ನು ವಶಕ್ಕೆ ಪಡೆದಿದ್ದಾರೆ. ನಂತರ ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಪ್ರಕರಣ ರದ್ದು ಕೋರಿ ಮೋಹನ್ ಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಾಧೀಶರಾದ ನಾಗಪ್ರಸನ್ನ ಅವರಿದ್ದ ಪೀಠ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ವೈಟ್‌ಫೀಲ್ಡ್ ಪೊಲೀಸರು ಪದೇಪದೇ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಗುಡುಗಿದೆ.
ಇಂದು ನಡೆಯುವ ವಿಚಾರಣೆಗೆ ಎಸಿಪಿ ಮತ್ತು ಡಿಸಿಪಿ ಖುದ್ದು ಹಾಜರಾಗುವಂತೆ ಸೂಚಿಸಿದೆ. ಒಂದು ವೇಳೆ ಹಾಜರಾಗದಿದ್ದರೆ ಪೊಲೀಸ್ ಕಮಿಷನರ್‌ಗೆ ಸಮನ್ಸ್ ನೀಡುವುದಾಗಿ ಎಚ್ಚರಿಕೆ ನೀಡಿದೆ.
ಇತ್ತೀಚೆಗಷ್ಟೇ, ಸಿವಿಲ್ ಪ್ರಕರಣ ವಿಚಾರದಲ್ಲಿ ಕಾನೂನು ಉಲ್ಲಂಘನೆ ಮಾಡಿದ ವೈಟ್‌ಫೀಲ್ಡ್ ಇನ್ಸ್‌ಪೆಕ್ಟರ್‌ಗೆ ಕೋರ್ಟ್ 3 ಲಕ್ಷ ರೂ. ದಂಡ ವಿಧಿಸಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.

