ಮೈಸೂರು: ಸಚಿವ ನಾಗೇಂದ್ರ ರಾಜೀನಾಮೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ. ಅವರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ನಾಗೇಂದ್ರ ತಪ್ಪು ಮಾಡಿಲ್ಲ. ಬಿಜೆಪಿಯವರು ಅನಗತ್ಯವಾಗಿ ಓರ್ವ ನಿರಪರಾಧಿಯನ್ನು ಬಲಿ ಪಡೆದಿದ್ದಾರೆ. ನಾಗೇಂದ್ರ ಅವರು ನೊಂದು ರಾಜೀನಾಮೆ ಕೊಟ್ಟಿದ್ದಾರೆ ಎಂದರು.
ಬಿಜೆಪಿಯವರಿಗೆ ಬರಿ ರಾಜಕಾರಣ ಮುಖ್ಯ ಹೊರತು ಬೇರೇನೂ ಮುಖ್ಯವಲ್ಲ. ರಾಜ್ಯದ ಜನತೆಯ ಹಿತ ಮುಖ್ಯವಲ್ಲ, ನಾವು ಹಲವು ಬಾರಿ ಚರ್ಚೆಗೆ ಬನ್ನಿ ಎಂದು ಮನವಿ ಮಾಡಿದೆವು. ಆದಗ್ಯೂ ಅವರು ನಮ್ಮ ಮಾತು ಕೇಳಲಿಲ್ಲ. ಇಡೀ ಸದನವನ್ನು ಹಾಳು ಮಾಡಿದರು. ರಾಜ್ಯದಲ್ಲಿ ಬರದ ಸಮಸ್ಯೆಯಿದೆ, ನೀರಾವರಿ ಸಮಸ್ಯೆಯಿದೆ, ಕಾವೇರಿ ಸಮಸ್ಯೆಯಿದೆ. ಇದ್ಯಾವುದೂ ಅವರಿಗೆ ಮುಖ್ಯವೆನಿಸಿಲ್ಲ. ರಾಜ್ಯದ ಜನತೆಯ ಹಿತ ಅವರಿಗೆ ಬೇಕಿಲ್ಲ. ಅವರಿ ಬೇಕಾಗಿರುವುದು ಕೇವಲ ರಾಜಕಾರಣ ಮಾಡುವುದು. ಬಿಜೆಪಿಯವರಿಗೆ ನಾನು ಸಿಎಂ ಆಗಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕುತಂತ್ರದಿಂದ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಗಳನ್ನು ಮಾಡಿ ಹೋರಾಟದ ಹೆಸರಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಈಗ ಓರ್ವ ನಿರಪರಧಿಯನ್ನು ಬಲಿಪಶು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

