ಬಾಲಿವುಡ್ನ ‘ಬಿಗ್ ಬಿ’ ಅಮಿತಾಬ್ ಬಚ್ಚನ್ ಅವರ ‘ಆಂಗ್ರಿ ಯಂಗ್ ಮ್ಯಾನ್’ ಇಮೇಜ್ ತೆರೆಯ ಮೇಲೆ ಎಷ್ಟು ಫೇಮಸ್ಸೋ, ಅಷ್ಟೇ ಗಂಭೀರ ವ್ಯಕ್ತಿತ್ವ ಅವರದ್ದು. ಆದರೆ, ಒಮ್ಮೆ ಅಮಿತಾಬ್ ಬಚ್ಚನ್ ಅವರು ತಮ್ಮ ಸಹನಟಿ ಮೇಲಿನ ಕೋಪಕ್ಕಾಗಿ ಆಕೆಯನ್ನು ಸಿನಿಮಾದಿಂದಲೇ ಹೊರಹಾಕಿಸಿದ್ದರು ಎಂಬ ವಿಚಾರ ಈಗ ಹರಿದಾಡುತ್ತಿದೆ. ಆ ನಟಿ ಬೇರೆ ಯಾರೂ ಅಲ್ಲ, ಹಿರಿಯ ನಟಿ ಮೌಶುಮಿ ಚಟರ್ಜಿ.
ಘಟನೆಯ ಹಿನ್ನೆಲೆ ಹೀಗಿದೆ: 80 ಮತ್ತು 90ರ ದಶಕದಲ್ಲಿ ಅಮಿತಾಬ್ ಬಚ್ಚನ್ ಚಿತ್ರರಂಗದ ಅಘೋಷಿತ ರಾಜನಂತಿದ್ದರು. ಅವರ ಮಾತಿಗೆ ನಿರ್ದೇಶಕರು ಮತ್ತು ನಿರ್ಮಾಪಕರು ಅಷ್ಟೇ ಗೌರವ ನೀಡುತ್ತಿದ್ದರು. ಶಕ್ತಿ ಸಮಂತಾ ನಿರ್ದೇಶನದ ‘ಬರ್ಸಾತ್ ಕಿ ಏಕ್ ರಾತ್’ ಚಿತ್ರಕ್ಕೆ ಮೊದಲು ನಾಯಕಿಯಾಗಿ ಮೌಶುಮಿ ಚಟರ್ಜಿ ಅವರನ್ನೇ ಆಯ್ಕೆ ಮಾಡಲಾಗಿತ್ತು. ಆದರೆ, ಅಂತಿಮ ಕ್ಷಣದಲ್ಲಿ ಅವರನ್ನು ಕೈಬಿಟ್ಟು ರಾಖಿ ಗುಲ್ಜಾರ್ ಅವರನ್ನು ಕರೆತರಲಾಯಿತು.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮೌಶುಮಿ ಚಟರ್ಜಿ ಅವರೇ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. “ಒಂದು ದಿನ ಶಕ್ತಿ ಸಮಂತಾ ಅವರು ನನಗೆ ಫೋನ್ ಮಾಡಿ, ‘ನಿಮಗೂ ಅಮಿತಾಬ್ ಬಚ್ಚನ್ ಅವರಿಗೂ ಜಗಳವಾಗಿದೆಯೇ?’ ಎಂದು ಕೇಳಿದರು. ಅದಕ್ಕೆ ನಾನು ‘ಇಲ್ಲ ಸರ್, ನಾನು ಎಲ್ಲರ ಜೊತೆ ಮರ್ಯಾದೆಯಿಂದ ನಡೆದುಕೊಳ್ಳುತ್ತೇನೆ’ ಎಂದಿದ್ದೆ. ಆದರೆ ಶಕ್ತಿ ಸರ್ ಹೇಳಿದ ಮಾತು ನನಗೆ ಶಾಕ್ ನೀಡಿತ್ತು. ಅಮಿತಾಬ್ ಅವರಿಗೆ ನನ್ನ ಜೊತೆ ನಟಿಸಲು ಇಷ್ಟವಿರಲಿಲ್ಲವಂತೆ. ನಮ್ಮಿಬ್ಬರ ‘ಟ್ಯೂನಿಂಗ್’ ಸರಿಯಿಲ್ಲ ಎಂಬ ಕಾರಣ ನೀಡಿ ಅವರು ನನ್ನನ್ನು ಬದಲಾಯಿಸಲು ಒತ್ತಾಯಿಸಿದ್ದರು” ಎಂದು ಮೌಶುಮಿ ವಿವರಿಸಿದ್ದಾರೆ.
ಆ ಕಾಲದ ನಂಬರ್ ಒನ್ ಸ್ಟಾರ್ ಆಗಿದ್ದ ಅಮಿತಾಬ್ ಬಚ್ಚನ್ ಅವರ ಮನಸ್ಸಿಗೆ ವಿರುದ್ಧವಾಗಿ ಹೋಗಲು ನಿರ್ದೇಶಕರಿಗೆ ಸಾಧ್ಯವಿರಲಿಲ್ಲ. ಹೀಗಾಗಿ ಮೌಶುಮಿ ಅವರನ್ನು ಚಿತ್ರದಿಂದ ಕೈಬಿಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ಮೌಶುಮಿ, “ನಾನು ಇಲ್ಲಿ ಕೆಲಸ ಮಾಡಲು ಬಂದಿದ್ದೇನೆ ಹೊರತು ಸ್ನೇಹ ಬೆಳೆಸುವುದಕ್ಕಲ್ಲ” ಎಂದು ನೇರವಾಗಿಯೇ ಹೇಳಿದ್ದರು. ಆನಂತರ ಶಕ್ತಿ ಸಮಂತಾ ಅವರು ಮೌಶುಮಿ ಅವರಿಗೆ ‘ಆನಂದ್ ಆಶ್ರಮ’ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಸಮಾಧಾನಪಡಿಸಿದ್ದರು.
ಈ ಘಟನೆಯು ಅಂದಿನ ಕಾಲದಲ್ಲಿ ಸೂಪರ್ ಸ್ಟಾರ್ಗಳ ಪ್ರಭಾವ ಎಷ್ಟಿತ್ತು ಮತ್ತು ಒಬ್ಬ ನಟಿಯ ವೃತ್ತಿಜೀವನದ ಮೇಲೆ ಅದು ಹೇಗೆ ಪರಿಣಾಮ ಬೀರುತ್ತಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ.

