ನೀವು ಸರ್ಕಾರಿ ಅಥವಾ ಖಾಸಗಿ ವಲಯದ ಉದ್ಯೋಗಿಯಾಗಿದ್ದರೆ, ಪ್ರತಿ ತಿಂಗಳ ನಿಮ್ಮ ಸಂಬಳದ ಸ್ಲಿಪ್ (Salary Slip) ಗಮನಿಸಿದಾಗ ಅಲ್ಲಿ ‘Professional Tax’ (PT) ಎಂಬ ಹೆಸರಿನಲ್ಲಿ ಹಣ ಕಡಿತವಾಗಿರುವುದನ್ನು ನೋಡಿರುತ್ತೀರಿ. ಆದಾಯ ತೆರಿಗೆಯಷ್ಟೇ ಪ್ರಾಮುಖ್ಯತೆ ಹೊಂದಿರುವ ಈ ತೆರಿಗೆಯ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಏನಿದು ವೃತ್ತಿ ತೆರಿಗೆ? ಇದನ್ನು ಏಕೆ ಕಡಿತಗೊಳಿಸಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಹೌದು. ಭಾರತದಲ್ಲಿ ತೆರಿಗೆದಾರರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೇರ ಹಾಗೂ ಪರೋಕ್ಷವಾಗಿ ವಿವಿಧ ತೆರಿಗೆಗಳನ್ನು ಪಾವತಿಸುತ್ತಾರೆ. ಪರೋಕ್ಷ ತೆರಿಗೆಗಳಲ್ಲಿ GST ಮತ್ತು VAT ಪ್ರಮುಖವಾಗಿದ್ದರೆ, ನೇರ ತೆರಿಗೆಗಳಲ್ಲಿ ಆದಾಯ ತೆರಿಗೆಯ ಜೊತೆಗೆ ‘ವೃತ್ತಿ ತೆರಿಗೆ’ (Professional Tax) ಕೂಡ ಒಂದು. ಇದು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯಾಗಿದ್ದು, ಆರ್ಥಿಕ ಯೋಜನೆಗೆ ಸಂಬಂಧಿಸಿದಂತೆ ಇದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.
ವೃತ್ತಿ ತೆರಿಗೆ ಎಂದರೇನು?
ವೃತ್ತಿ ತೆರಿಗೆ ಎಂಬುದು ರಾಜ್ಯ ಸರ್ಕಾರಗಳು ವೃತ್ತಿ, ವ್ಯಾಪಾರ ಅಥವಾ ಉದ್ಯೋಗದಲ್ಲಿ ತೊಡಗಿರುವ ವ್ಯಕ್ತಿಗಳು ಅಥವಾ ಕಂಪನಿಗಳ ಮೇಲೆ ವಿಧಿಸುವ ನೇರ ತೆರಿಗೆಯಾಗಿದೆ. ಇದು ವ್ಯಕ್ತಿಯ ಒಟ್ಟು ಆದಾಯದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ.
• ಉದ್ಯೋಗಿಗಳು: ಉದ್ಯೋಗದಾತರು (Employers) ಉದ್ಯೋಗಿಗಳ ಸಂಬಳದಿಂದ ಈ ತೆರಿಗೆಯನ್ನು ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಸುತ್ತಾರೆ.
• ಸ್ವಯಂ ಉದ್ಯೋಗಿಗಳು: ವೈದ್ಯರು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ಗಳಂತಹ ಸ್ವಯಂ ಉದ್ಯೋಗಿಗಳು ಇದನ್ನು ನೇರವಾಗಿ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ.
ಗಮನಿಸಿ: ಭಾರತೀಯ ಸಂವಿಧಾನದ ವಿಧಿ 276 ರ ಪ್ರಕಾರ, ವೃತ್ತಿ ತೆರಿಗೆಯು ವರ್ಷಕ್ಕೆ ₹2,500 ಕ್ಕಿಂತ ಹೆಚ್ಚಿರಬಾರದು.
ಯಾರು ಈ ತೆರಿಗೆ ಪಾವತಿಸಬೇಕು?
ಯಾವುದೇ ವೃತ್ತಿಯ ಮೂಲಕ ಆದಾಯ ಗಳಿಸುವ ಪ್ರತಿಯೊಬ್ಬರೂ ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಇವರು ಸೇರಿದ್ದಾರೆ:
• ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಸಂಬಳ ಪಡೆಯುವ ನೌಕರರು.
• ವೈದ್ಯರು, ವಕೀಲರು, ಕನ್ಸಲ್ಟೆಂಟ್ಗಳು, ಆರ್ಕಿಟೆಕ್ಟ್ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳು.
• ವ್ಯಾಪಾರ ಮಾಲೀಕರು ಮತ್ತು ಸಣ್ಣ ಉದ್ಯಮಿಗಳು.
(ಆದರೆ, ನಿಗದಿತ ಮಿತಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ರಾಜ್ಯದಿಂದ ರಾಜ್ಯಕ್ಕೆ ವಿನಾಯಿತಿ ಇರುತ್ತದೆ.)
ವೃತ್ತಿ ತೆರಿಗೆ ವಿಧಿಸುವ ರಾಜ್ಯಗಳು ಯಾವುವು?
ಭಾರತದ ಎಲ್ಲಾ ರಾಜ್ಯಗಳೂ ವೃತ್ತಿ ತೆರಿಗೆಯನ್ನು ವಿಧಿಸುವುದಿಲ್ಲ. ಪ್ರಸ್ತುತ ಇದನ್ನು ವಿಧಿಸುತ್ತಿರುವ ಕೆಲವು ಪ್ರಮುಖ ರಾಜ್ಯಗಳು:
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ ಮತ್ತು ಒಡಿಶಾ.
ತೆರಿಗೆ ವಿಧಿಸದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು
ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಗೋವಾ ಮತ್ತು ಜಮ್ಮು ಕಾಶ್ಮೀರ.
| ವೈಶಿಷ್ಟ್ಯ | ಆದಾಯ ತೆರಿಗೆ | ವೃತ್ತಿ ತೆರಿಗೆ |
| ವಿಧಿಸುವವರು | ಕೇಂದ್ರ ಸರ್ಕಾರ | ರಾಜ್ಯ ಸರ್ಕಾರ |
| ವ್ಯಾಪ್ತಿ | ಇಡೀ ಭಾರತಕ್ಕೆ ಅನ್ವಯ | ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತ |
| ಗರಿಷ್ಠ ಮಿತಿ | ಮಿತಿಯಿಲ್ಲ (ಸ್ಲ್ಯಾಬ್ ಆಧಾರಿತ) | ಗರಿಷ್ಠ ₹2,500 ಪ್ರತಿ ವರ್ಷಕ್ಕೆ |
| ಪಾವತಿ ಅವಧಿ | ವಾರ್ಷಿಕವಾಗಿ | ಸಾಮಾನ್ಯವಾಗಿ ಮಾಸಿಕವಾಗಿ |
| ವಿನಾಯಿತಿ | ಆದಾಯದ ಆಧಾರದ ಮೇಲೆ | ರಾಜ್ಯಗಳ ನಿಯಮಗಳ ಮೇಲೆ ಆಧಾರಿತ |
ವೃತ್ತಿತೆರಿಗೆಯು ನಿಮ್ಮCTC ಯ ಭಾಗವೇ?
ಇಲ್ಲ, ವೃತ್ತಿ ತೆರಿಗೆಯು ನಿಮ್ಮ CTC ಯ ಭಾಗವಲ್ಲ. ಇದು ನಿಮ್ಮ ಒಟ್ಟು ಸಂಬಳದಿಂದ (Gross Salary) ಕಡಿತಗೊಳ್ಳುವ ಮೊತ್ತವಾಗಿದೆ. ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 16(iii) ಅಡಿಯಲ್ಲಿ, ನೀವು ಪಾವತಿಸಿದ ವೃತ್ತಿ ತೆರಿಗೆಯನ್ನು ನಿಮ್ಮ ಒಟ್ಟು ಆದಾಯದಿಂದ ಕಳೆದು ತೆರಿಗೆ ವಿನಾಯಿತಿ ಪಡೆಯಬಹುದು.

