ಬೆಂಗಳೂರು: ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವ ಮುನ್ನ ಕಡ್ಡಾಯ ಪ್ರಾಥಮಿಕ ವಿಚಾರಣೆ ಸೇರಿ ಹಲವು ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ. ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.
ಮಾನಹಾನಿ ಅಥವಾ ಅಂತಹುದೇ ಪ್ರಕರಣಗಳಲ್ಲಿ ನೊಂದ ವ್ಯಕ್ತಿ ಆಗಿರಬೇಕು. ಗಂಭೀರ ಅಪರಾಧಗಳ ಹೊರತುಪಡಿಸಿ ಸಂಬಂಧವಿಲ್ಲದ ಮೂರನೇ ವ್ಯಕ್ತಿ ನೀಡುವ ದೂರುಗಳನ್ನು ಸ್ವೀಕರಿಸಬಾರದು ಎಂದು ಸೂಚಿಸಿದ್ದಾರೆ. ರಾಜಕೀಯ ಪೋಸ್ಟ್ ಗಳು ಅಥವಾ ಸೂಕ್ಷ್ಮ ವಿಚಾರಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವ ಮೊದಲು ಸರ್ಕಾರಿ ಅಭಿಯೋಜಕರಿಂದ ಕಾನೂನು ಸಲಹೆ ಪಡೆಯುವುದು ಕಡ್ಡಾಯವಾಗಿದೆ.
ಒಂದು ವೇಳೆ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಬಿಎನ್ಎಸ್ಎಸ್ ಸೆಕ್ಷನ್ 176(1)ರ ಅಡಿಯಲ್ಲಿ ಮುಕ್ತಾಯಗೊಳಿಸಬೇಕು. ವಾಕ್ ಸ್ವಾತಂತ್ರ್ಯವನ್ನು ಗೌರವಿಸಬೇಕು. ಪೋಸ್ಟ್ ನಿಂದ ಸಾರ್ವಜನಿಕ ಶಾಂತಿಗೆ ತಕ್ಷಣದ ಅಪಾಯವಿದ್ದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಯು ಸಾಮಾಜಿಕ ಜಾಲತಾಣಗಳ ಪೋಸ್ಟ್ ನಿಂದ ತನಗೆ ಮಾನಹಾನಿಯಾಗಿದೆ ಎಂದರೆ ಅವರಿಗೆ ಮಾನಹಾನಿ ಅಸಂಜ್ಞೆಯ ಅಪರಾಧವಾಗಿದೆ ಎಂಬುದನ್ನು ತಿಳಿಸಬೇಕು. ಜೊತೆಗೆ ದೂರುದಾರರಿಗೆ ನ್ಯಾಯಾಲಯದ ಮೊರೆ ಹೋಗಲು ತಿಳಿಸಬೇಕು ಎನ್ನಲಾಗಿದೆ.

