ಅಡಿಕೆ ಮತ್ತು ಕಾಳು ಮೆಣಸು ಬೆಳೆಯುವ ರೈತರಿಗೆ ಮಹತ್ವದ ಮಾಹಿತಿ ಒಂದಿದೆ. ಹವಾಮಾನ ಆಧಾರಿತ ಬೆಳೆ ವಿಮೆಯು ರೈತರ ಕೈ ಸೇರುತ್ತಿದೆ. ಈ ಕುರಿತು ಉತ್ತರ ಕನ್ನಡ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಾರರಿಗೆ ಇಂದು ಸಂತಸದ ಸುದ್ದಿ ಲಭಿಸಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಧೋರಣೆಯಿಂದಾಗಿ ಜಿಲ್ಲೆಯ ರೈತರಿಗೆ ಮರೀಚಿಕೆಯಾಗಿದ್ದ ಹವಾಮಾನ ಆಧಾರಿತ ಬೆಳೆ ವಿಮೆಯು, ಇಂದು ಕೊನೆಗೂ ರೈತರ ಕೈಸೇರಲು ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿಳಂಬ ನೀತಿಯ ನಡುವೆಯೂ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಸತತವಾಗಿ ಪ್ರಯತ್ನಿಸಿ ವಿಮಾ ಕಂಪನಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ ಫಲವಾಗಿ ಇಂದು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವಿಮಾ ಮೊತ್ತ ನೇರವಾಗಿ ಜಮೆಯಾಗುತ್ತಿದೆ ಎಂದು ಪೋಸ್ಟ್ ಹಾಕಿದ್ದಾರೆ.
ಮೊದಲ ಹಂತವಾಗಿ ಇಂದು ಸುಮಾರು 14 ಕೋಟಿ ರೂಪಾಯಿಗಳ ಮೊತ್ತವು ಅರ್ಹ ರೈತರ ಖಾತೆಗಳನ್ನು ತಲುಪಿದ್ದು, ಈ ಪ್ರಕ್ರಿಯೆಯು ಇಂದಿನಿಂದ ಸತತವಾಗಿ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ಕಳೆದ ಕೆಲವು ಸಮಯದಿಂದ ಎಲೆ ಚುಕ್ಕಿ ರೋಗದ ಬಾಧೆ ಹಾಗೂ ಇಳುವರಿ ಕುಂಠಿತದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ನಮ್ಮ ಜಿಲ್ಲೆಯ ಕೃಷಿಕರಿಗೆ ಈ ವಿಮಾ ಮೊತ್ತವು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ರೈತರ ಸಂಕಷ್ಟಕ್ಕೆ ಶೀಘ್ರವಾಗಿ ಸ್ಪಂದಿಸಿ ವಿಮೆ ವಿತರಣೆಗೆ ದೃಢವಾಗಿ ನಿಂತ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಹಾಗೂ ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಜಿಲ್ಲೆಯ ಸಮಸ್ತ ರೈತರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಂಸದರು ಹೇಳಿದ್ದಾರೆ.
ನಮ್ಮ ಜಿಲ್ಲೆಯ ಪ್ರತಿಯೊಬ್ಬ ಅರ್ಹ ರೈತರಿಗೂ ಈ ವಿಮೆಯ ಸೌಲಭ್ಯ ಹಂತ ಹಂತವಾಗಿ ತಲುಪಲಿದ್ದು, ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಈ ಆಸರೆಯು ರೈತರಿಗೆ ದೊಡ್ಡ ಬಲ ತುಂಬಲಿದೆ. ರೈತರ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ ಎಂದು ಸಂಸದರು ತಿಳಿಸಿದ್ದಾರೆ.

