ರಾಯ್‌ಪುರ: ಮುಂಬೈನ ಪೈಧೋನಿಯಲ್ಲಿ ಕಳೆದ ತಿಂಗಳು ಒಂದೇ ಕುಟುಂಬದ ನಾಲ್ವರು ಕಲ್ಲಂಗಡಿ ಸೇವಿಸಿ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಈಗ ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಅಂತಹದ್ದೇ ಮತ್ತೊಂದು ದುರಂತ ಸಂಭವಿಸಿದೆ. ಕಲ್ಲಂಗಡಿ ಹಣ್ಣು ತಿಂದ 15 ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಮೂವರು ಮಕ್ಕಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಘಟನೆಯ ಹಿನ್ನೆಲೆ
ಮೃತ ಬಾಲಕನನ್ನು ಅಖಿಲೇಶ್ ಧಿವರ್ (15) ಎಂದು ಗುರುತಿಸಲಾಗಿದೆ. ಅಖಿಲೇಶ್ ತನ್ನ ಸಂಬಂಧಿಕರಾದ ಶ್ರೀ ಧಿವರ್ (4), ಪಿಂಟು ಧಿವರ್ (12) ಮತ್ತು ಹಿತೇಶ್ ಧಿವರ್ (13) ಅವರೊಂದಿಗೆ ಮದುವೆ ಸಮಾರಂಭ ಮುಗಿಸಿ ಘುರ್ಕೋಟ್ ಗ್ರಾಮದಲ್ಲಿರುವ ಸೋದರಮಾವನ ಮನೆಗೆ ಬಂದಿದ್ದನು. ಭಾನುವಾರ ಸಂಜೆ ಇವರೆಲ್ಲರೂ ಕತ್ತರಿಸಿಟ್ಟಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು.
ಕಾಣಿಸಿಕೊಂಡ ಲಕ್ಷಣಗಳು
ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ಅಖಿಲೇಶ್‌ಗೆ ವಾಂತಿ, ಭೇದಿ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಉಳಿದ ಮೂವರು ಮಕ್ಕಳಲ್ಲೂ ಇದೇ ರೀತಿಯ ಲಕ್ಷಣಗಳು ಕಂಡುಬಂದಿವೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಖಿಲೇಶ್ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ವೈದ್ಯರು ಹೇಳುವುದೇನು?
ಸಿವಿಲ್ ಸರ್ಜನ್ ಡಾ. ಎಸ್ ಕುಜೂರ್ ಅವರು ನೀಡಿರುವ ಮಾಹಿತಿ ಪ್ರಕಾರ,ಇದು ವಿಷಾಹಾರ (Food Poisoning) ಸೇವನೆಯಿಂದ ಸಂಭವಿಸಿರುವ ಸಾಧ್ಯತೆಯಿದೆ.
ಕಲ್ಲಂಗಡಿ ಹಣ್ಣನ್ನು ಬೆಳಿಗ್ಗೆಯೇ ಕತ್ತರಿಸಿ ಇಡಲಾಗಿತ್ತು ಮತ್ತು ಅದನ್ನು ಹಲವು ಗಂಟೆಗಳ ನಂತರ ಸೇವಿಸಲಾಗಿದೆ.ತೆರೆದಿಟ್ಟ ಹಣ್ಣಿನಲ್ಲಿ ಬ್ಯಾಕ್ಟೀರಿಯಾಗಳು ಅಥವಾ ಮಾಲಿನ್ಯ ಉಂಟಾಗಿರುವ ಶಂಕೆಯಿದೆ.ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹಣ್ಣಿನ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ

