ಮೂರು ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಅಣೆಕಟ್ಟೆಗೆ ಹೊಸ ಕ್ರೆಸ್ಟ್ಗೇಟ್ ಅಳವಡಿಕೆ ಪ್ರಕ್ರಿಯೆ ಚುರುಕಾಗಿ ನಡೆಯುತ್ತಿದೆ. ಮೇ ತಿಂಗಳ ಒಳಗೆ ಎಲ್ಲಾ 33 ಗೇಟ್ಗಳ ಅಳವಡಿಕೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಬೇಸಿಗೆಯ ಹಿನ್ನಲೆಯಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧಾರ ಮಾಡಲಾಗಿದೆ. ನೀರು ಹರಿಸುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 2025-26ನೇ ಜಲವರ್ಷದಲ್ಲಿ ನೀರಿನ ಲಭ್ಯತೆ ಆಧರಿಸಿ ಪ್ರಾದೇಶಿಕ ಆಯುಕ್ತರು ಕಲಬುರಗಿ ಇವರ ಆದೇಶದ ಮೇರೆಗೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ತುಂಗಭದ್ರಾ ಜಲಾಶಯದಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಲಯ ನಿಗದಿಪಡಿಸಿದ ವೇಳಾಪಟ್ಟಿಯಂತೆ ನೀರಿನ್ನು ಹರಿಸಲು ನಿರ್ಧಾರಿಸಲಾಗಿದೆ.
ಅದರಂತೆ ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಯಲ್ಲಿನ ತೂಬುಗಳ ಗೇಟ್ಗಳ ಮುಖಾಂತರ ಕೆರೆಕಟ್ಟೆಗಳಲ್ಲಿ ಕುಡಿಯುವ ಸಲುವಾಗಿ ನೀರು ಶೇಖರಣೆ ಮಾಡಲು ಹಾಗೂ ನಿಗದಿತ ಪ್ರಮಾಣದ ನೀರನ್ನು 104 ಮೈಲ್ ವರೆಗೆ ಹರಿಸಿ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸಹಯೋಗದೊಂದಿಗೆ ಸಮರ್ಪಕ ನೀರು ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ.
ನಿಗದಿತ ವೇಳಾಪಟ್ಟಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ (0 ರಿಂದ 104 ಮೈಲ್ ವರೆಗೆ) ಕುಡಿಯುವ ನೀರಿಗಾಗಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿರುವ ನೀರಿನ ಕೆರೆಗಳನ್ನು ತುಂಬಿಸಲು ಮಾರ್ಚ್ 16 (ಸೋಮವಾರ ಬೆಳಗ್ಗೆ 8 ಗಂಟೆ) ರಿಂದ ಮಾರ್ಚ್ 27ರ (ಶುಕ್ರವಾರ ಬೆಳಗ್ಗೆ 8 ಗಂಟೆ) ವರೆಗೆ 2000 ಕ್ಯೂಸೆಕ್ನಂತೆ ಕುಡಿಯುವ ನೀರು ಹರಿಸಲಾಗುವುದು.
ಅದರಂತೆ, ಯರಮರಸ್ ವಿಭಾಗ ಮಾರ್ಚ್ 19, 20 & ಮಾ. 21ರ ವರೆಗೆ, ಸಿರವಾರ ವಿಭಾಗ ಮಾ. 21, 22 & 23 ರವರೆಗೆ, ಸಿಂಧನೂರು ವಿಭಾಗ ಮಾ. 24, 25 & ಮಾ. 26ರ ವರೆಗೆ ಹಾಗೂ ವಡ್ಡರಹಟ್ಟಿ ವಿಭಾಗದ ಮಾ. 26 & ಮಾ. 27ರ ವರೆಗೆ ನೀರು ಹರಿಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದು ರೈತ ಭಾಂದವರಿಗೆ ತಿಳಿಸಲಾಗಿದೆ.
ಕಾಲುವೆಯಲ್ಲಿ ಮತ್ತು ಕಾಲುವೆಯ ಅಂಚಿನಲ್ಲಿ ಓಡಾಡುವುದು, ಕಾಲುವೆಯಿಂದ ನೀರನ್ನು ಜನಸಾಮಾನ್ಯರು ಅಥವಾ ರೈತರು ಬಳಸುವುದನ್ನು ಮತ್ತು ಎತ್ತಿಕೊಳ್ಳುವುದನ್ನು ನಿಷೇಧಗೊಳಿಸಲಾಗಿರುತ್ತದೆ.
ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸುವಂತೆ ಕನೀನಿನಿ, ತುಂಗಭದ್ರಾ ಯೋಜನಾ ವೃತ್ತ ಮುನಿರಾಬಾದ್ ಅಧೀಕ್ಷಕ ಅಭಿಯಂತರರು ಹಾಗೂ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಸ್.ಬಿ ಮಲ್ಲಿಗವಾಡ ಅವರು ತಿಳಿಸಿದ್ದಾರೆ.

