ಚುಟುಕು ಕ್ರಿಕೆಟ್ ಸಮರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026 ಮುಕ್ತಾಯದ ಹಂತಕ್ಕೆ ಬಂದಿದ್ದು, ಅಂತಿಮ ಪಂದ್ಯ ಫೈನಲ್‌ನಲ್ಲಿ ಯಾವ ಎರಡು ತಂಡಗಳು ಸೆಣಸಾಡಲಿವೆ ಎಂಬುದು ಇಂದು ( ಮಾರ್ಚ್ 5 ) ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.
ನಿನ್ನೆ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಕಂಡ ನ್ಯೂಜಿಲೆಂಡ್ ಫೈನಲ್ ಪ್ರವೇಶ ಪಡೆದುಕೊಂಡಿದ್ದು, ಇಂದು ನಡೆಯುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹಣಾಹಣಿಯಲ್ಲಿ ಗೆಲ್ಲುವ ತಂಡ ಭಾನುವಾರ ( ಮಾರ್ಚ್ 8 ) ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಕಣಕ್ಕಿಳಿಯಲಿದೆ.
ಇನ್ನು ಸತತ ಮೂರನೇ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಈ ಪಂದ್ಯವನ್ನು ಗೆದ್ದು ಟೂರ್ನಿಯ ಅಂತಿಮ ಹಂತ ತಲುಪಲು ಯೋಜನೆ ರೂಪಿಸುತ್ತಿದ್ದು, ಇದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಸ್ಯಾಮ್ ಕರನ್ ಭಾರತ ತಂಡಕ್ಕೆ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ.
ಮೊದಲಿಗೆ ವಾಂಖೆಡೆ ಕ್ರೀಡಾಂಗಣದ ಬಗ್ಗೆ ಮಾತನಾಡಿದ ಸಾಮ್ ಕರನ್ ಭಾರತದ ಕ್ರೀಡಾಂಗಣಗಳಲ್ಲಿ ನಾವು ಸಾಕಷ್ಟು ಬಾರಿ ಆಡಿರುವ ಕಾರಣ ಅವು ತಮಗೆ ಗೊತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತ ತಂಡದಲ್ಲಿರುವ ಆಟಗಾರರ ಪೈಕಿ ಬಹುತೇಕರ ಜತೆ ಆಡಿರುವ ಅನುಭವವಿದೆ ಎಂದೂ ಸಹ ಕರನ್ ತಿಳಿಸಿದ್ದು, ತಮಗೆ ಯಾವುದೇ ಒತ್ತಡವಿಲ್ಲ ಎಂದಿದ್ದಾರೆ.
ಇನ್ನು ವಾಂಖೆಡೆ ಕ್ರೀಡಾಂಗಣದ ಬಗ್ಗೆ ಮಾತನಾಡಿದ ಸ್ಯಾಮ್ ಕರನ್ ‘ಇದೊಂದು ಅದ್ಭುತ ಕ್ರೀಡಾಂಗಣ ಹಾಗೂ ಐತಿಹಾಸಿಕವಾದದ್ದು. ಗುರುವಾರ ರಾತ್ರಿ ಆ ಕ್ರೀಡಾಂಗಣ ಬಾಯಿ ಮುಚ್ಚಿಕೊಳ್ಳಲಿದೆ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ’ ಎಂದು ಹೇಳಿಕೆ ನೀಡಿ ಭಾರತ ತಂಡಕ್ಕೆ ವಾರ್ನಿಂಗ್ ಕೊಟ್ಟಿದ್ದಾರೆ.
ಸ್ಯಾಮ್ ಕರನ್ ನೀಡಿದ ಈ ಹೇಳಿಕೆ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯನ್ನು ನೆನಪಿಸಿದೆ. ಅಂದು ಕಮಿನ್ಸ್ ‘ದೊಡ್ಡ ಗುಂಪೊಂದು ಸೈಲೆಂಟ್ ಆಗುವುದಕ್ಕಿಂತಲೂ ತೃಪ್ತಿಕರವಾದದ್ದು ಬೇರೆ ಯಾವುದೂ ಇಲ್ಲ’ ಎಂದು ಹೇಳುವ ಮೂಲಕ ಅಹ್ಮದಾಬಾದ್‌ನಲ್ಲಿ ಭಾರತ ತಂಡದ ಅಭಿಮಾನಿಗಳ ನೀಲಿ ಸಮುದ್ರವನ್ನು ಸೈಲೆಂಟ್ ಆಗುವ ಹಾಗೆ ಮಾಡಿದ್ದರು.

