HomeKarnataka18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ:ಜಿಲ್ಲಾಧಿಕಾರಿ ಸ್ನೇಹಲ್ ಆರ್.

18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಿ:ಜಿಲ್ಲಾಧಿಕಾರಿ ಸ್ನೇಹಲ್ ಆರ್.

ಧಾರವಾಡ : ಜಿಲ್ಲೆಯಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 18 ವರ್ಷ ಪೂರ್ಣಗೊಂಡಿರುವ ಪ್ರತಿಯೊಬ್ಬ ಅರ್ಹ ಯುವ ಮತದಾರರೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಹೇಳಿದರು.

ಅವರು ಇಂದು (ಸೆ.19) ಬೆಳಿಗ್ಗೆ ಅಂಜುಮನ್ ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026 ರ ಅಂಗವಾಗಿ ಸ್ವೀಪ್ ಸಮಿತಿ ವಿಶೇಷ ಅಭಿಯಾನ ಉದ್ಘಾಟಿಸಿ, ಮಾತನಾಡಿದರು.

ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಧಾರವಾಡ ಹಾಗೂ ಇತರೆ ಕೇಂದ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ ಅರ್ಹ ವಿದ್ಯಾರ್ಥಿಗಳು ಮತದಾರರ ಪಟ್ಟಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವುದರ ಜೊತೆಗೆ, ತಮ್ಮ ಸುತ್ತಮುತ್ತಲಿನ ಅರ್ಹ ನಾಗರಿಕರಿಗೂ ಈ ಕುರಿತು ಮಾಹಿತಿ ನೀಡಿ, ಹೆಸರು ಸೇರ್ಪಡೆಗೆ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

18 ವರ್ಷ ಪೂರ್ಣಗೊಂಡ ಯಾವುದೇ ಯುವಕ ಅಥವಾ ಯುವತಿ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ವಿಶೇಷ ನೋಂದಣಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ತಮ್ಮ ಮನೆಯಲ್ಲಿ ಯಾರಾದರೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿಲ್ಲದಿದ್ದರೆ, ಅಂತಹವರು ತಕ್ಷಣ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಬೇಕು. ಯುವ ಮತದಾರರμÉ್ಟೀ ಅಲ್ಲದೆ, ವಿವಿಧ ಕಾರಣಗಳಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳದ ಹಿರಿಯರು ಸೇರಿದಂತೆ ಎಲ್ಲ ಅರ್ಹ ನಾಗರಿಕರಿಗೂ ಹೆಸರು ನೋಂದಾಯಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಮತದಾನ ಪ್ರತಿಯೊಬ್ಬರ ಜವಾಬ್ದಾರಿ: ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ, ಹಕ್ಕು ಕೂಡ ಆಗಿದೆ. ಸಂವಿಧಾನವು 18 ವರ್ಷ ಪೂರ್ಣಗೊಂಡ ಅರ್ಹ ನಾಗರಿಕರಿಗೆ ಮತದಾನದ ಹಕ್ಕು ನೀಡಿದೆ. ಯಾವುದೇ ಒತ್ತಡ ಅಥವಾ ಯಾರನ್ನೂ ಅವಲಂಬಿಸದೆ, ಪ್ರತಿಯೊಬ್ಬ ನಾಗರಿಕರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಅವಕಾಶ ಹೊಂದಿದ್ದಾರೆ. ಮತದಾರರಾಗಿ ದೇಶದ ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡುವಲ್ಲಿ ಪ್ರತಿಯೊಬ್ಬ ನಾಗರಿಕನ ಮತವೂ ಮಹತ್ವದ್ದಾಗಿದೆ. ನಮ್ಮ ಊರು, ನಗರ ಹಾಗೂ ಸಮಾಜದಲ್ಲಿ ಬದಲಾವಣೆ ತರಬೇಕು, ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಬೇಕು, ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯಗಳನ್ನು ಹೊಂದಿರುವವರು ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಚಲಾಯಿಸಬೇಕು. ನಮ್ಮ ಆಶೋತ್ತರಗಳಿಗೆ ಅನುಗುಣವಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ಮತದಾನದ ಮೂಲಕ ದೊರೆಯುತ್ತದೆ. ಆದ್ದರಿಂದ ಮೊದಲ ಹೆಜ್ಜೆಯಾಗಿ ಪ್ರತಿಯೊಬ್ಬ ಅರ್ಹ ನಾಗರಿಕರೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ಯುವಕರಿಗೆ ಹೆಚ್ಚಿನ ಜವಾಬ್ದಾರಿ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಂಡ ನಂತರ ತಮ್ಮ ಸುತ್ತಮುತ್ತಲಿನ ಅರ್ಹ ವ್ಯಕ್ತಿಗಳಿಗೂ ಹೆಸರು ನೋಂದಾಯಿಸಿಕೊಳ್ಳುವಂತೆ ತಿಳಿಸಬೇಕು. ಚುನಾವಣೆ ಸಂದರ್ಭದಲ್ಲಿ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ಯುವಕರು ಸಮಾಜದ ಇಂದಿನ ಹಾಗೂ ನಾಳೆಯ ಪ್ರಮುಖ ಪ್ರಜೆಗಳಾಗಿರುವುದರಿಂದ ತಮ್ಮ ಚುನಾವಣಾ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಅರಿವು ಹೊಂದಿರಬೇಕು. ಯುವಕರು ತಮ್ಮ ಜೀವನದಲ್ಲಿ ದೊಡ್ಡ ಗುರಿಯನ್ನು ಹೊಂದಬೇಕು. ಸುಲಭವಾಗಿ ಸಾಧಿಸಬಹುದಾದ ಗುರಿಗಳಿಗೆ ಮಾತ್ರ ಸೀಮಿತವಾಗದೆ, ಸಾಧಿಸಲು ಸವಾಲಾಗುವಂತಹ ಗುರಿಗಳನ್ನು ಇಟ್ಟುಕೊಳ್ಳಬೇಕು. ದೊಡ್ಡ ಗುರಿ ಹೊಂದುವುದರಿಂದ ಜೀವನದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಕರು ಚಿಕ್ಕ ಕನಸುಗಳನ್ನು ಕಾಣದೆ ದೊಡ್ಡ ಕನಸುಗಳನ್ನು ಕಾಣಬೇಕು ಹಾಗೂ ತಮ್ಮ ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಕರಡು ಮತದಾರರ ಪಟ್ಟಿ ಪರಿಶೀಲಿಸಲು ಸಲಹೆ: ಜಿಲ್ಲೆಯಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು. ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕುಟುಂಬದ ಎಲ್ಲ ಸದಸ್ಯರು ಈಗಾಗಲೇ ಮತದಾರರಾಗಿದ್ದರೆ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಇಲ್ಲದಿದ್ದಲ್ಲಿ ಅರ್ಹತೆಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಂಡು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಸಮಾಜವನ್ನು ಸುಧಾರಿಸಲು ಸ್ವಚ್ಛತೆಯೇ ಮೊದಲ ಹೆಜ್ಜೆಯಾಗಿದೆ. ಧಾರವಾಡ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಸ್ವಚ್ಛತಾ ಹಿ ಸೇವಾ ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿರುವ ಚುನಾವಣೆಗಳಲ್ಲಿ ಪ್ರತಿಯೊಬ್ಬ ಅರ್ಹ ನಾಗರಿಕರು ಪಾಲ್ಗೊಳ್ಳುವುದು ಅಗತ್ಯ. ಲೋಕಸಭೆ, ವಿಧಾನಸಭೆ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನ ಪರಿಷತ್ ಸೇರಿದಂತೆ ವಿವಿಧ ಚುನಾವಣೆಗಳು ದೇಶದಲ್ಲಿ ನಡೆಯುತ್ತವೆ. 1951 ರಿಂದ ದೇಶದಲ್ಲಿ ಹಲವು ಚುನಾವಣೆಗಳು ನಡೆದಿದ್ದು, ಜನಮತದ ತೀರ್ಪಿಗೆ ಗೌರವ ನೀಡುವ ಮೂಲಕ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರಲಾಗಿದೆ. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವಕ-ಯುವತಿಯೂ ಮತದಾರರಾಗಿ ನೋಂದಣಿಯಾಗಬೇಕು. ಮತದಾನ ಮಾಡುವುದು ಕೇವಲ ಹಕ್ಕಲ್ಲ, ಜವಾಬ್ದಾರಿಯೂ ಆಗಿದೆ. ಸಂವಿಧಾನವು ಯಾವುದೇ ಭೇದಭಾವವಿಲ್ಲದೆ ಅರ್ಹ ನಾಗರಿಕರಿಗೆ ಮತದಾನದ ಹಕ್ಕನ್ನು ನೀಡಿದ್ದು, ಯುವಜನರು ತಮ್ಮ ಹಕ್ಕು ಮತ್ತು ಜವಾಬ್ದಾರಿಯನ್ನು ಅರಿತು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

61 ನೇ ಸಂವಿಧಾನ ತಿದ್ದುಪಡಿಯ ಮೂಲಕ ಮತದಾನದ ವಯೋಮಿತಿಯನ್ನು 21 ರಿಂದ 18 ವರ್ಷಕ್ಕೆ ಇಳಿಸಲಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ಯುವಕರು ತಮ್ಮ ಮತದಾನದ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಅನರ್ಹರ ಹೆಸರುಗಳನ್ನು ತೆಗೆದುಹಾಕುವುದು ಹಾಗೂ ಅರ್ಹರ ಹೆಸರುಗಳನ್ನು ಸೇರ್ಪಡೆಗೊಳಿಸುವುದು ಎಸ್‍ಐಆರ್ ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಸೆ.19 ಮತ್ತು 20 ರಂದು ರಾಜ್ಯಾದ್ಯಂತ ವಿಶೇಷ ಮತದಾರರ ನೋಂದಣಿ ಅಭಿಯಾನ ನಡೆಯುತ್ತಿದ್ದು, ಕಾಲೇಜುಗಳಲ್ಲಿಯೂ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

18 ವರ್ಷ ಪೂರ್ಣಗೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಫಾರ್ಮ್-6 ಭರ್ತಿ ಮಾಡಿ ಸಮೀಪದ ಬಿಎಲ್‍ಒ ಅಥವಾ ಕಾಲೇಜಿನ ಸಂಬಂಧಿತ ಸಿಬ್ಬಂದಿಗೆ ಸಲ್ಲಿಸಬೇಕು. ಪ್ರತಿಯೊಂದು ಮತವೂ ಮಹತ್ವದ್ದಾಗಿದ್ದು, ಒಂದು ಮತದಿಂದ ಏನಾಗುತ್ತದೆ ಎಂಬ ಮನೋಭಾವ ತೊರೆದು ಯುವಕರು ಕಡ್ಡಾಯವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.

ಸೈಕಲ್ ಮತ್ತು ಬೈಕ್ ರ್ಯಾಲಿ: ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹಾಗೂ ಮತದಾರರ ಜಾಗೃತಿಗಾಗಿ ಸ್ವೀಪ್ ವತಿಯಿಂದ ಸೈಕಲ್ ಮತ್ತು ಬೈಕ್ ರ್ಯಾಲಿ ನಡೆಯಿತು. ಅಂಜುಮನ್ ಕಾಲೇಜಿನಿಂದ ಆರಂಭವಾದ ರ್ಯಾಲಿ ಸುಭಾಸ್ ರಸ್ತೆ, ಕೆಸಿಸಿ ಬ್ಯಾಂಕ್, ಸ್ವಾಮಿ ವಿವೇಕಾನಂದ ಸರ್ಕಲ್, ಜುಬ್ಲಿ ಸರ್ಕಲ್ ಮೂಲಕ ಸಾಗಿ ಮತ್ತೆ ಅಂಜುಮನ್ ಕಾಲೇಜಿನಲ್ಲಿ ಮುಕ್ತಾಯವಾಯಿತು.

ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಪ್ರಾಧ್ಯಾಪಕಿ ಸ್ವಚ್ಛತಾ ಹಿ ಸೇವಾ ಪ್ರತಿಜ್ಞೆಯನ್ನು ಬೋಧಿಸಿದರು. ಅಂಜುಮನ್ ಸಂಸ್ಥೆಯ ಪ್ರಾಂಶುಪಾಲ ಎನ್. ಬಿ. ನಾಲತ್ವಾಡ ಅವರು ಸ್ವಾಗತಿಸಿದರು. ಸಯ್ಯದ್ ತಾಜುದ್ದೀನ್ನಿಸಾ ಅವರು ನಿರೂಪಿಸಿ, ವಂದಿಸಿದರು.

ವೇದಿಕೆಯಲ್ಲಿ ಪ್ರೊಬೇಶನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಬಿ. ಎಸ್. ರಾಠೋಡ, ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿ ಎಮ್.ಎಸ್. ಹುಡೆದಮನಿ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ಲಾಹಜ್ ಬಸೀರ್ ಅಹ್ಮದ್ ಜಹಾಂಗೀರದಾರ್, ಕಾರ್ಯದರ್ಶಿ ಕಧೀರ್ ನಾಸಿಂ ಸರಿಗಿತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳು, ಬಿಎಲ್‍ಓ ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular