ಬೆಂಗಳೂರು: ಹೋಂಡಾ ಕಂಪನಿ ಕರ್ನಾಟಕದಿಂದ ತನ್ನ ಉದ್ಯಮವನ್ನು ಸ್ಥಳಾಂತರಿಸುವುದಿಲ್ಲ. ರಾಜ್ಯದಲ್ಲೇ ಮುಂದುವರಿಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಕೋಲಾರದ ನರಸಾಪುರದಲ್ಲಿರುವ ಹೋಂಡಾ ಘಟಕದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಅವರು ತಿರುಗೇಟು ನೀಡಿದ್ದಾರೆ.
ಕೋಲಾರದ ನರಸಾಪುರದಲ್ಲಿರುವ ಹೋಂಡಾ ಘಟಕದ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಹೋಂಡಾ ಕಂಪನಿ ರಾಜ್ಯದಿಂದ ಹೊರಹೋಗುತ್ತಿದೆ ಎಂಬ ಆರೋಪವನ್ನು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ. ಇಂತಹ ಹೇಳಿಕೆಗಳು ಕರ್ನಾಟಕದ ಕೈಗಾರಿಕಾ ಬೆಳವಣಿಗೆ ಹಾಗೂ ಹೂಡಿಕೆ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ.
ನರಸಾಪುರದಲ್ಲಿ 7,800ಕ್ಕೂ ಹೆಚ್ಚು ಉದ್ಯೋಗಿಗಳು
ಹೋಂಡಾ ಕಂಪನಿಗೆ 2011ರಿಂದ ಹಂತ ಹಂತವಾಗಿ ಕೋಲಾರ ಜಿಲ್ಲೆಯ ನರಸಾಪುರದಲ್ಲಿ 135 ಎಕರೆ ಜಮೀನು ನೀಡಲಾಗಿದೆ. 2013ರಿಂದ ಇಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ನಡೆಯುತ್ತಿದೆ. ಪ್ರಸ್ತುತ ಪ್ರತಿದಿನ ಸುಮಾರು 10,000 ವಾಹನಗಳನ್ನು ಉತ್ಪಾದಿಸಲಾಗುತ್ತಿದ್ದು, 7,800ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 35 ಎಕರೆ ಪ್ರದೇಶದಲ್ಲಿ ಬಿಡಿಭಾಗಗಳ ಗೋದಾಮು ಮತ್ತು ವಿತರಣಾ ಘಟಕವನ್ನೂ ಹೋಂಡಾ ಹೊಂದಿದೆ. ಇದು ದಕ್ಷಿಣ ಭಾರತದ ಅಗತ್ಯಗಳಿಗೆ ಪೂರೈಕೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
₹600 ಕೋಟಿ ಹೂಡಿಕೆಯ ಎಲೆಕ್ಟ್ರಿಕ್ ವಾಹನ ಘಟಕ
ಹೋಂಡಾ ಕಂಪನಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗೂ ಆಸಕ್ತಿ ತೋರಿದ್ದು, ನರಸಾಪುರ ಘಟಕದಲ್ಲೇ ಇವಿ ಉತ್ಪಾದನೆಯನ್ನು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಪಾಟೀಲ್ ಹೇಳಿದ್ದಾರೆ. ನರಸಾಪುರದಲ್ಲಿ ಸುಮಾರು ₹600 ಕೋಟಿ ಹೂಡಿಕೆಯೊಂದಿಗೆ ಪ್ರತ್ಯೇಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಪ್ರಸ್ತಾವನೆ ಈ ಹಿಂದೆ ಪ್ರಕಟವಾಗಿತ್ತು.
ರಾಜ್ಯ ಸರ್ಕಾರದ ಕಡೆಯಿಂದ ಹೋಂಡಾ ಕಂಪನಿಯೊಂದಿಗೆ ವ್ಯವಹರಿಸುವಾಗ ಯಾವುದೇ ಲೋಪವಾಗಿಲ್ಲ. ಕಂಪನಿಯೂ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕುಮಾರಸ್ವಾಮಿ ಹೇಳಿದ್ದೇನು?
ಅಕ್ಟೋಬರ್ 31ರಂದು ಮಾತನಾಡಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು. ಹೋಂಡಾ ಕಂಪನಿಯು ಕೋಲಾರದ ನರಸಾಪುರದಲ್ಲಿ ಉದ್ದೇಶಿಸಿದ್ದ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಯೋಜನೆಯನ್ನು ಕೈಬಿಟ್ಟಿದೆ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಟೀಲ್, ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವ ಬದಲು ರಾಜ್ಯಕ್ಕೆ ಹೆಚ್ಚಿನ ಕೈಗಾರಿಕೆಗಳು ಮತ್ತು ಹೂಡಿಕೆಗಳನ್ನು ತರಲು ಕುಮಾರಸ್ವಾಮಿ ಪ್ರಯತ್ನಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
ಒಂದು ಕಂಪನಿ ರಾಜ್ಯಕ್ಕೆ ಬಂದರೆ ಅದು ಕೇವಲ ಕಾರ್ಖಾನೆಯನ್ನು ಮಾತ್ರ ಸ್ಥಾಪಿಸುವುದಿಲ್ಲ; ಸಾವಿರಾರು ಕುಟುಂಬಗಳ ಬದುಕಿಗೂ ಆಸರೆಯಾಗುತ್ತದೆ. ಸ್ಥಳೀಯ ಯುವಕರಿಗೆ ಉದ್ಯೋಗ, ಸಣ್ಣ ಕೈಗಾರಿಕೆಗಳಿಗೆ ಕೆಲಸ, ವ್ಯಾಪಾರಿಗಳಿಗೆ ಆದಾಯ ಹೀಗೆ ಹಲವು ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇಂತಹ ಹೋಂಡಾ ಕಂಪನಿ ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಲಿದೆ ಎಂಬ ಚರ್ಚೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

