HomeKarnatakaದಾವಣಗೆರೆ ಮತದಾರರ ಪಟ್ಟಿಯಲ್ಲಿ 10 ಮಂದಿ ನೇಪಾಳಿಗರು ಪತ್ತೆ...!

ದಾವಣಗೆರೆ ಮತದಾರರ ಪಟ್ಟಿಯಲ್ಲಿ 10 ಮಂದಿ ನೇಪಾಳಿಗರು ಪತ್ತೆ…!

ದಾವಣಗೆರೆ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ವೇಳೆ ದಾವಣಗೆರೆ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ನೇಪಾಳ ಮೂಲದ 10 ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿರುವುದು ಕಂಡು ಬಂದಿದೆ. ಈ ಪೈಕಿ ಕೆಲವರು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಚಾರಣೆಯ ವೇಳೆ ನೇಪಾಳದವರು ಭಾರತೀಯ ಪೌರತ್ವದ ಯಾವುದೇ ದಾಖಲೆ ಒದಗಿಸಿಲ್ಲ. ಹೀಗಾಗಿ ಭಾರತೀಯ ಪೌರತ್ವ ಹೊಂದಿರದ ಅವರನ್ನು ಮತದಾರರ ಪಟ್ಟಿಗೆ ಸೇರಿಸಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವಾಸವಿರುವ ಸುಮಾರು 10 ನೇಪಾಳ ಮೂಲದ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿದ್ದು, ವಿಚಾರಣೆ ವೇಳೆ ಅವರು ಭಾರತೀಯ ಪೌರತ್ವದ ಯಾವುದೇ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ.  ಭಾರತೀಯ ಪೌರತ್ವ ಇಲ್ಲದವರನ್ನು ಮತದಾರರ ಪಟ್ಟಿಗೆ ಸೇರಿಸಲು ಬರುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಾನುಸಾರ ವಿಚಾರಣೆ ನಡೆಸಿ, ಅವರ ಪಡಿತರ ಚೀಟಿ ರದ್ದುಗೊಳಿಸುವುದು ಹಾಗೂ ಆಧಾರ್ ಕಾರ್ಡ್ ಸ್ಪಷ್ಟೀಕರಣಕ್ಕಾಗಿ ಇಲಾಖೆಗೆ ವರದಿ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇಪಾಳ ಪ್ರಜೆಗಳು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಹೇಗೆ ಪಡೆದರು ಎನ್ನುವ ಬಗ್ಗೆ ವಿಚಾರಣೆ ನಡೆಸಿ ಅವರ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. ಆಧಾರ್ ಕಾರ್ಡ್ ನೀಡಿರುವ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಇಲಾಖೆಗೆ ವರದಿ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ

ಪ್ರತಿಯೊಬ್ಬ ಅರ್ಹ ಮತದಾರರ ಹಕ್ಕು ರಕ್ಷಣೆಗೆ ಜಿಲ್ಲಾಡಳಿತ ಬದ್ಧ

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅತ್ಯಂತ ಪಾರದರ್ಶಕತೆ, ಸೂಕ್ಷ್ಮತೆ ಮತ್ತು ವಿವೇಚನೆಯಿಂದ ನಡೆಯುತ್ತಿದ್ದು, ಯಾವುದೇ ಒಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.

ಹೊನ್ನಾಳಿ ತಾಲೂಕಿನಲ್ಲಿ ಬಾಕಿ ಇದ್ದ 738 ನೋಟಿಸ್‌ಗಳನ್ನು ಪೂರ್ಣವಾಗಿ ಜಾರಿಗೊಳಿಸಲಾಗಿದೆ. ಉಳಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ನಿಯಮಾನುಸಾರ ಮತದಾರರಿಗೆ ನೋಟಿಸ್‌ ತಲುಪಿಸಲಾಗಿದೆ. ವಿಚಾರಣೆಗಳು ಈಗಾಗಲೇ ಆರಂಭಗೊಂಡಿವೆ. ವಿಚಾರಣೆ ಸುಗಮವಾಗಿ ನಡೆಯಲು ಭಾರತ ಚುನಾವಣಾ ಆಯೋಗದ ಅನುಮತಿಯೊಂದಿಗೆ ಹೆಚ್ಚುವರಿಯಾಗಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.

ಕೇವಲ ಮೃತಪಟ್ಟವರ ಹಾಗೂ ದ್ವಿಪ್ರತಿ ಆಗಿರುವ ಮತದಾರರ ಹೆಸರುಗಳನ್ನು ಮಾತ್ರ ಸೂಕ್ತ ಪರಿಶೀಲನೆ ನಂತರ ಪಟ್ಟಿಯಿಂದ ತೆಗೆಯಲಾಗುತ್ತಿದೆ, ಗರ್ಭಿಣಿಯರು, ಬಾಣಂತಿಯರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಜೈಲಿನಲ್ಲಿರುವವರು ಹಾಗೂ ವಿದೇಶದಲ್ಲಿರುವಂತಹ(ಉದಾ: ದುಬೈ) ಮತದಾರರ ಹೆಸರುಗಳನ್ನು ಏಕಾಏಕಿ ತೆರವುಗೊಳಿಸುವುದಿಲ್ಲ. ಅವರಿಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತಿದೆ. ಜೈಲಿನಲ್ಲಿರುವ ಮತದಾರರ ಪರಿಶೀಲನೆಗೆ ಅಧಿಕಾರಿಗಳನ್ನು ಕಳುಹಿಸಲಾಗುತ್ತಿದ್ದು, ಬಳ್ಳಾರಿ ಮುಂತಾದ ಜೈಲುಗಳಿಗೆ ಅಧಿಕಾರಿಗಳು ನೇರವಾಗಿ ತೆರಳಿ ವಿಚಾರಣೆ ನಡೆಸಲಿದ್ದಾರೆ. ಎಂದರು.

ಹಿರಿಯ ನಾಗರಿಕರು ಮತ್ತು ವಿಶೇಷಚೇತನ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗುವ ಅಗತ್ಯವಿರುವುದಿಲ್ಲ. ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ತೆರಳಿ ವಿಚಾರಣೆ ನಡೆಸಲಿದ್ದಾರೆ. ಮಾಜಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಪ್ರಶಸ್ತಿ ಪುರಸ್ಕೃತರು ಹಾಗೂ ಗಣ್ಯ ವ್ಯಕ್ತಿಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಪಟ್ಟಿಯಿಂದ ತೆರವುಗೊಳಿಸುವುದಿಲ್ಲ ಎಂದು ತಿಳಿಸಿದರು.

ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ, ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅವರು ವಿಚಾರಣೆ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.  ಒಟ್ಟು 36,000 ಅರ್ಜಿಗಳಲ್ಲಿ ಈಗಾಗಲೇ 20,000 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ ಇರುವ 16,000 ಅರ್ಜಿಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಯುವ ಮತದಾರರ ನೋಂದಣಿ: ಯುವ ಮತದಾರರ ಜಾಗೃತಿ: ಯುವ ಮತದಾರರನ್ನು ತಲುಪಲು ಕಾಲೇಜುಗಳಲ್ಲಿ ‘ವೋಟರ್ ಲಿಟರಸಿ ಕ್ಲಬ್’(VLC) ಮೂಲಕ ಜಾಗೃತಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಹೊಸದಾಗಿ ಮದುವೆಯಾಗಿ ಬಂದವರು, ಬೇರೆ ಜಿಲ್ಲೆಯಿಂದ ಸ್ಥಳಾಂತರಗೊಂಡವರು ಮತ್ತು 18 ವರ್ಷ ತುಂಬಿದ ಯುವಕ-ಯುವತಿಯರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಮತದಾರರ ಜಾಗೃತಿಯನ್ನು ಹೆಚ್ಚಿಸಲು ಪ್ರತಿ ಹಂತದಲ್ಲೂ ಬಿಎಲ್‌ಒ ಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ವೋಟರ್ಸ್‌ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಹಾಗೂ ಪರಿಷ್ಕರಣೆ ಕುರಿತು ಆಟೋಗಳ ಮೂಲಕ ಧ್ವನಿವರ್ಧಕ ಬಳಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಸಂಜೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅರ್ಹ ಮತದಾರರ ಹಕ್ಕು ಮೊಟಕುಗೊಳ್ಳದಂತೆ, ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಬದ್ಧವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌ ಚುನಾವಣಾ ಶಾಖೆಯ ಸಿಬ್ಬಂದಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular