ಬೆಂಗಳೂರು: ಗಿಡಮೂಲಿಕೆಗಳ ಮಾರಾಟಕ್ಕೆಂದು ಆಫ್ರಿಕಾಗೆ ಹೋಗಿದ್ದ ರಾಜ್ಯದ ೮ ಜನ ಹಕ್ಕಿಪಿಕ್ಕಿ ಜನಾಂಗದ ಜನರು ವೀಸಾ ಅವಧಿ ಮುಗಿದ ಕಾರಣ ಅಲ್ಲಿಯೇ ಲಾಕ್ ಆಗಿರುವ ಘಟನೆ ನಡೆದಿದೆ.
ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮೂಲದ 8 ಮಂದಿ ಹಕ್ಕಿಪಿಕ್ಕಿ ಬುಡಕಟ್ಟು ಜನರು ಸೆಂಟ್ರಲ್ ಆಫ್ರಿಕಾದಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ವೀಸಾ ಅವಧಿ ಮುಗಿದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸೆಂಟ್ರಲ್ ಆಫ್ರಿಕಾಗೆ ಹೋಗಿದ್ದ ೮ ಜನರ ವೀಸಾ ಅವಧಿ ಮುಗಿದಿದೆ. ಸ್ಥಳೀಯ ಪೊಲೀಸರು 1.5 ಲಕ್ಷ ದಂಡ ನೀಡುವಂತೆ ಸೂಚಿಸಿದ್ದಾರೆ. ಹಾಗಾಗಿ ಬಂಧನ ಭೀತಿ ಎದುರಾಗಿದೆ. ಈ ಬಗ್ಗೆ ಭಾರತ ಸರ್ಕಾರ ಮಧ್ಯಪ್ರವೇಶಿಸಿ ತಮ್ಮನ್ನು ರಕ್ಷಿಸಬೇಕೆಂದು ಮನವಿ ಮಾಡಿದ್ದಾರೆ.
ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಜನರು ಪ್ರತಿವರ್ಷ ಗಿಡಮೂಲಿಕೆಗಳ ವ್ಯಾಪಾರಕ್ಕೆ ವಿವಿಧ ದೇಶಗಳಿಗೆ ತೆರಳುತ್ತಾರೆ. ಅದರಂತೆ ಈ ಬಾರಿ ಸೆಂಟ್ರಲ್ ಆಫ್ರಿಕಾಗೆ ತೆರಳಿದ್ದ ಎಂಟು ಜನರು ವೀಸಾ ಅವಧಿ ಮುಗಿದ ಕಾರಣ ಅಲ್ಲಿಯೇ ಸಿಲುಕಿಕೊಂಡಿದ್ದಾರೆ.
2025 ಡಿಸೆಂಬರ್ 22ರಂದು ಇವರ ವೀಸಾ ಅವಧಿ ಮುಗಿದಿದೆ. ಬಳಿಕ ಸ್ಥಳೀಯ ಪೊಲೀಸರು ವೀಸಾ ನವೀಕರಣಕ್ಕೆ ತಲಾ 1.5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ದಂಡ ಪಾವತಿ ವಿಳಂಬವಾದರೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನು ನೀಡಿದ್ದಾರಂತೆ.
ಹಕ್ಕಿಪಿಕ್ಕಿಗಳ ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅವರು ದೇಶ ಬಿಟ್ಟು ತೆರಳಲು ಸಾಧ್ಯವಾಗದೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಭಾರತ ಸರ್ಕಾರ ನೆರವಿಗೆ ಬರುವಂತೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪುನೀತ್ ಕುಮಾರ್, 8 ಜನರು ಸೆಂಟ್ರಲ್ ಆಫ್ರಿಕಾದಲ್ಲೇ ಇದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಈ ಬಗ್ಗೆ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಗಿಡಮೂಲಿಕೆಗಳ ಮಾರಾಟಕ್ಕಾಗಿ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಸುಮಾರು 150ಕ್ಕೂ ಹೆಚ್ಚು ಮಂದಿ ಆಫ್ರಿಕಾದಲ್ಲಿ ಸಿಲುಕಿದ್ದರು. ಬಳಿಕ ಸುಡಾನ್‌ನಿಂದ ಭಾರತೀಯರನ್ನು ರಕ್ಷಿಸಿ ಕರೆತರಲು ಭಾರತ ಸರ್ಕಾರ ಆರಂಭಿಸಿದ್ದ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯಲ್ಲಿ ಅವರನ್ನು ಕರೆತರಲಾಗಿತ್ತು.

