ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಘಾತಕಾರಿ ವಿಡಿಯೋವೊಂದು ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಗನ ಎತ್ತರ (Height) ಹೆಚ್ಚಾಗಲಿ ಎಂಬ ಅವೈಜ್ಞಾನಿಕ ಹಾಗೂ ಮೂರ್ಖತನದ ನಂಬಿಕೆಯಿಂದ ಹೆತ್ತ ಪೋಷಕರೇ ಮಗನನ್ನು ಬಾಗಿಲಿನ ಫ್ರೇಮ್ಗೆ ಕಟ್ಟಿ ಹಾಕಿ ವಿಕೃತವಾಗಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ.
ನೆರೆಮನೆಯ ಮಹಿಳೆಯಿಂದ ಪೋಷಕರ ತರಾಟೆ:
ಮಗುವಿನ ತೀವ್ರ ಆಕ್ರಂದನ ಮತ್ತು ಕಿರುಚಾಟ ಕೇಳಿ ಧಾವಿಸಿದ ನೆರೆಮನೆಯ ಮಹಿಳೆಯೊಬ್ಬರು ಈ ಇಡೀ ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸುವ ಮೂಲಕ ಪೋಷಕರನ್ನು ತರಾಟೆಗೆ ತಗೆದುಕೊಂಡಿದ್ದಾರೆ. “ಮಗುವಿಗೆ ಈ ರೀತಿ ಟಾರ್ಚರ್ ಕೊಡ್ತಾರಾ?” ಎಂದು ಮಹಿಳೆ ಪ್ರಶ್ನಿಸಿದಾಗ, ಮಗುವಿನ ತಾಯಿ ತೀವ್ರ ಅಹಂಕಾರದಿಂದ, “ಇಲ್ಲಿ ಏನು ನಡೀತಿದೆ ಅಂತ ನಿಮಗೆ ಗೊತ್ತಾ? ಇದು ನಮ್ಮ ವೈಯಕ್ತಿಕ ವಿಷಯ, ನಮ್ಮ ಮನೆ ವಿಚಾರಕ್ಕೆ ತಲೆ ಹಾಕಬೇಡಿ” ಎಂದು ಜಗಳಕ್ಕೆ ನಿಂತಿದ್ದಾರೆ.
ಎತ್ತರ ಹೆಚ್ಚಿಸಲು ಈ ಶಿಕ್ಷೆ ತಂದೆಯ ಅಸಂಬದ್ಧ ಸಮರ್ಥನೆ:
ಮಗುವಿನ ಅಳು ನಿಲ್ಲದಿದ್ದಾಗ, ಕೊನೆಗೆ ತಂದೆಯು ಮತ್ತೊಬ್ಬರ ಸಹಾಯದೊಂದಿಗೆ ಮಗುವನ್ನು ಬಾಗಿಲಿನ ಫ್ರೇಮ್ನಿಂದ ಕೆಳಗೆ ಇಳಿಸಿದ್ದಾನೆ. ಮಹಿಳೆ ಪ್ರಶ್ನಿಸುವುದನ್ನು ಮುಂದುವರಿಸಿದಾಗ, “ಮಗುವಿನ ಹೈಟ್ ಜಾಸ್ತಿ ಮಾಡಲು ಹೀಗೆ ಮಾಡಿದ್ದೇವೆ” ಎಂದು ತಂದೆ ಅಚ್ಚರಿಯ ಸಮರ್ಥನೆ ನೀಡಿದ್ದಾನೆ ಅಷ್ಟೇ ಅಲ್ಲದೆ, ತಮ್ಮ ಅನುಮತಿ ಇಲ್ಲದೆ ವಿಡಿಯೋ ರೆಕಾರ್ಡ್ ಮಾಡುತ್ತಿರುವುದಾಗಿ ನೆರೆಮನೆಯ ಮಹಿಳೆಯ ಮೇಲೆಯೇ ಆರೋಪ ಮಾಡಿದ್ದಾನೆ.
ಕಠಿಣ ಕ್ರಮಕ್ಕೆ ನೆಟ್ಟಿಗರ ಆಗ್ರಹ:
ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಹೆತ್ತ ಪೋಷಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಶಿಸ್ತು ಕಲಿಸುವ ಪೋಷಣೆಯಲ್ಲ, ಬದಲಿಗೆ ಮಕ್ಕಳ ಮೇಲಿನ ಕ್ರೂರ ದೌರ್ಜನ್ಯ (Child Abuse) ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ತಕ್ಷಣವೇ ಕಾನೂನು ಜಾರಿ ಸಂಸ್ಥೆಗಳು ಮತ್ತು ಪೊಲೀಸರು ಮಧ್ಯಪ್ರವೇಶಿಸಿ, ಈ ಕ್ರೂರಿ ಪೋಷಕರನ್ನು ಬಂಧಿಸಬೇಕು ಹಾಗೂ ಮಗುವನ್ನು ಅವರ ವಶದಿಂದ ಮುಕ್ತಗೊಳಿಸಿ ಸುರಕ್ಷಿತ ಜಾಗಕ್ಕೆ ಕಳುಹಿಸಬೇಕು ಎಂದು ಆನ್ಲೈನ್ನಲ್ಲಿ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ ಒತ್ತಾಯಿಸಲಾಗುತ್ತಿದೆ.

