ತುಮಕೂರು: ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಸಮೀಪದ ಕುಂದುನಹಳ್ಳಿ ಪಾಳ್ಯದ ಬಳಿ ಅಪಘಾತ ಸಂಭವಿಸಿದ್ದು, ಗ್ರಾಮ ಆಡಳಿತ ಅಧಿಕಾರಿ ಮೃತಪಟ್ಟಿದ್ದಾರೆ,
ಮಾಯಸಂದ್ರ ಹೋಬಳಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೂವಪ್ಪ ರಾಥೋಡ್(35) ಮೃತಪಟ್ಟವರು ಎಂದು ಹೇಳಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯವರಾದ ಪೂವಪ್ಪ ಕೆಲವು ವರ್ಷಗಳಿಂದ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ತಮ್ಮ ಜನಪರ ಸೇವೆಯಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಿನ್ನೆ ಸಂಜೆ ಕಚೇರಿ ಕೆಲಸ ಮುಗಿಸಿಕೊಂಡು ಕಾರ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರ್ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಪೂವಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಜನ ಸಂಚಾರ ವಿರಳವಾಗಿದ್ದರಿಂದ ತಡವಾಗಿ ಘಟನೆ ಬೆಳಕಿಗೆ ಬಂದಿದೆ. ತುರುವೇಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

