ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರ ಸುತ್ತ ವಿವಾದಗಳ ಸರಣಿ ಮುಂದುವರಿದಿದ್ದು, ಅವರ ವಿರುದ್ಧ ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಬೆನ್ನಲ್ಲೇ ವಿಚಾರಣೆಗೆ ಹಾಜರಾಗುವಂತೆ ಸ್ಯಾಂಡಲ್ವುಡ್ ನಟ ಧನ್ವೀರ್ ಗೌಡ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಚಾಮರಾಜಪೇಟೆ ಠಾಣೆ ಪೊಲೀಸರು, ರಾಜರಾಜೇಶ್ವರಿ ನಗರ ಮತ್ತು ಬಸವೇಶ್ವರ ನಗರ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನ ಆಧಾರದ ಮೇಲೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಾಗಿದೆ. ನಿರ್ಮಾಪಕ ಭೋಜರಾಜ್ ರೈ ನೀಡಿದ ದೂರಿನ ಮೇರೆಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ನಾಗರಾಜ್ಗೆ ಬೆದರಿಕೆ ಹಾಕಿದ ಆರೋಪ
ನಾಗರಾಜ್ ನೀಡಿರುವ ದೂರಿನ ಪ್ರಕಾರ, ನಟ ಧನ್ವೀರ್ ಅವರು ಫೋನ್ ಕರೆ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕರೆ ಹಾಗೂ ಸಂದೇಶಗಳ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಭೋಜರಾಜ್ ರೈಗೂ ಬೆದರಿಕೆ ಆರೋಪ
ಇನ್ನೊಂದು ಪ್ರಕರಣದಲ್ಲಿ ನಿರ್ಮಾಪಕ ಭೋಜರಾಜ್ ರೈ ಅವರು ಧನ್ವೀರ್ ವಿರುದ್ಧ ದೂರು ನೀಡಿದ್ದಾರೆ. ನಾಗರಾಜ್ ಅವರನ್ನು ಧನ್ವೀರ್ ಅವರ ಮನೆ ಬಳಿಯಿಂದ ಕರೆದುಕೊಂಡು ಬಂದ ವಿಚಾರಕ್ಕೆ ಸಂಬಂಧಿಸಿದಂತೆ ನಟರು ಫೋನ್ ಮಾಡಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
10 ಕೋಟಿ ರೂ. ಹಣದ ವ್ಯವಹಾರದ ಬಗ್ಗೆಯೂ ತನಿಖೆ?
ಈ ವಿವಾದದ ಹಿಂದೆ ಹಣಕಾಸಿನ ವ್ಯವಹಾರವೂ ಇದೆ ಎನ್ನಲಾಗಿದ್ದು, ಸುಮಾರು 10 ಕೋಟಿ ರೂ. ವಹಿವಾಟಿನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ಗಳನ್ನು ಪೊಲೀಸರು ಪರಿಶೀಲನೆಗೆ ಪಡೆದುಕೊಂಡಿದ್ದು, ಅವುಗಳ ವಿಧಿವಿಜ್ಞಾನ ಮತ್ತು ತಾಂತ್ರಿಕ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದರೆ, ಇತ್ತ ಅವರ ಆಪ್ತ ನಟ ಧನ್ವೀರ್ ಗೌಡ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಸಣ್ಣ ಮನಸ್ತಾಪದಂತೆ ಕಾಣಿಸಿಕೊಂಡಿದ್ದ ಜಟಾಪಟಿ ಇದೀಗ ಹಣಕಾಸಿನ ವ್ಯವಹಾರ, ಪರಸ್ಪರ ಆರೋಪ-ಪ್ರತ್ಯಾರೋಪ ಹಾಗೂ ಪೊಲೀಸ್ ದೂರುಗಳ ಹಂತಕ್ಕೆ ತಲುಪಿದ್ದು, ಸಂಘರ್ಷ ತಾರಕಕ್ಕೇರಿದೆ.ಇನ್ನು ನಟ ಧನ್ವೀರ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿರುವುದಾಗಿ ವರದಿಯಾಗಿದೆ. ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದ್ದು, ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

