ಬಳ್ಳಾರಿ : ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ‘ವಿಕಸಿತ ಭಾರತ ಯುವ ನಾಯಕರ ಸಂವಾದ 2027 ನಾಲೆಡ್ಜ್ ಟ್ರ್ಯಾಕ್ ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಯುವಜನರಿಗೆ ಆಹ್ವಾನ ನೀಡಲಾಗಿದೆ ಎಂದು ಮೇರಾ ಯುವ ಭಾರತದ ಜಿಲ್ಲಾ ಯುವ ಅಧಿಕಾರಿ ರಮೇಶ್ ಮಡ್ಡೆಪ್ಪ ತೊಳಿನವರ ತಿಳಿಸಿದ್ದಾರೆ.
ಈ ಕಾರ್ಯಕ್ರಮದ ಮೊದಲ ಹಂತವಾಗಿ ಮೇರಾ ಭಾರತ್ ಪೋರ್ಟಲ್‌ನಲ್ಲಿ ಆನ್‌ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಯುವಕ-ಯುವತಿಯರು ಅಧಿಕೃತ ಜಾಲತಾಣವಾದ mybharat.gov.in/quizzes/yuva ಮೂಲಕ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.
ಆನ್‌ಲೈನ್ ರಸಪ್ರಶ್ನೆ ಹಂತದಲ್ಲಿ ಯಶಸ್ವಿಯಾದ ಸ್ಪರ್ಧಿಗಳು ಮುಂದಿನ ಹಂತವಾದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.
ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಂತಗಳಲ್ಲಿ ಸ್ಪರ್ಧಿಸಲು ಅವಕಾಶ ದೊರೆಯಲಿದೆ. ಅಂತಿಮವಾಗಿ ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವ ಯುವ ನಾಯಕರು ‘ವಿಕಸಿತ ಭಾರತ’ ನಿರ್ಮಾಣದ ಕುರಿತ ತಮ್ಮ ದೂರದೃಷ್ಟಿ ಮತ್ತು ನವೀನ ಆಲೋಚನೆಗಳನ್ನು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಮುಂದೆ ನೇರವಾಗಿ ಮಂಡಿಸುವ ಮಹತ್ವದ ಅವಕಾಶವನ್ನು ಪಡೆಯಲಿದ್ದಾರೆ.
ಜಿಲ್ಲಾ ಮಟ್ಟದಿಂದ ಆರಂಭವಾಗಿ ರಾಷ್ಟ್ರ ಮಟ್ಟದ ವೇದಿಕೆಗೆ ತಮ್ಮ ಆಲೋಚನೆಗಳನ್ನು ಕೊಂಡೊಯ್ಯುವ ಈ ವಿಶಿಷ್ಟ ಅವಕಾಶವನ್ನು ಜಿಲ್ಲೆಯ ಅರ್ಹ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಕೌಲ್ ಬಜಾರ್ ವ್ಯಾಪ್ತಿಯಲ್ಲಿ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನು ಅತಿಕ್ರಮಣ ತೆರವು- ಜಮೀನು ವಶಕ್ಕೆ ಪಡೆದ ಜಿಲ್ಲಾಡಳಿತ
ಬಳ್ಳಾರಿ : ನಗರದ ಕೌಲ್ ಬಜಾರ್ ಸಮೀಪದ ‘ನಲ್ಲಚೆರುವು’ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಂದಾಯ ಹಾಗೂ ನಗರ ಪಾಲಿಕೆ ಅಧಿಕಾರಿಗಳುಪೊಲೀಸ್ ಬಂದೋಬಸ್ತ್ನಲ್ಲಿ ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಕೌಲ್ ಬಜಾರ್ ವಾರ್ಡ್ ನಂ. 16, ಟಿ.ಎಸ್. ನಂ. 21/1ಎ1 ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಂಡು, ಕೆರೆಯ ಕೊಳಚೆ ನೀರನ್ನು ಮೋಟಾರ್ ಪಂಪ್‌ಸೆಟ್ ಮೂಲಕ ಹರಿಸಿ ಅತಿಕ್ರಮಣ ಮಾಡಿಕೊಳ್ಳಲಾಗಿತ್ತು. ಈ ಕುರಿತು ಸಾರ್ವಜನಿಕರು ಮತ್ತು ಸ್ಥಳೀಯರಿಂದ ಬಂದ ದೂರುಗಳ ಮೇರೆಗೆ ಎಚ್ಚೆತ್ತ ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ನಡೆಸಿದರು.
ತೆರವುಗೊಳಿಸಿದ ಜಾಗದಲ್ಲಿ ‘ಇದು ಕರ್ನಾಟಕ ಸರ್ಕಾರದ ಸ್ವತ್ತು, ಇದನ್ನು ಅತಿಕ್ರಮಣ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂಬ ಎಚ್ಚರಿಕೆ ನಾಮಫಲಕವನ್ನು ಅಳವಡಿಸಲಾಯಿತು. ಅಕ್ರಮವಾಗಿ ಅಳವಡಿಸಲಾಗಿದ್ದ ನೀರಾವರಿ ಪೈಪ್‌ಗಳು ಹಾಗೂ ಮೋಟಾರ್‌ಗಳನ್ನು ತೆರವುಗೊಳಿಸಿ, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಯಿತು.ಅದೇರೀತಿಯಾಗಿ ಸ್ಥಳೀಯ ಕನಕ ದುರ್ಗಮ್ಮ ಗುಡಿಯಿಂದ-ವಾಲ್ಮೀಕಿ ವೃತ್ತಕ್ಕೆ ತೆರಳುವ ಮುಖ್ಯರಸ್ತೆಯ ಪಕ್ಕದಲ್ಲಿದ್ದ್ದ ನಿವೇಶನ ಜಾಗದ ಒತ್ತುವರಿ ತೆರವು ಮಾಡಿದರು. ನಗರದ ವ್ಯಾಪ್ತಿಯಲ್ಲೇ ಬರುವ ಈ ಎರಡೂ ಜಾಗಗಳು ಕೋಟ್ಯಿಂತರ ಮೌಲ್ಯದ್ದಾಗಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು, ‘ಸರ್ಕಾರಿ ಜಮೀನು, ಕೆರೆ-ಕಟ್ಟೆ ಒತ್ತುವರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ವತ್ತು ಅತಿಕ್ರಮಣಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ, ಡಿಡಿಎಲ್‌ಆರ್ ಪ್ರಮೋದ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಸರ್ವೇಯರ್‌ಗಳು, ಸ್ಥಳೀಯ ಪೋಲಿಸ್ ಠಾಣೆಯ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.

