ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ನಟ ವಿಜಯ್ ನೇತೃತ್ವದ ಟಿವಿಕೆ (ತಮಿಳಿಗ ವೆಟ್ರಿ ಕಳಗಂ) ಪಕ್ಷ ಸರ್ಕಾರ ರಚನೆಗೆ ಕಸರತ್ತು ನಡೆಸಿದೆ. ಈ ನಡುವೆ ಕಾಂಗ್ರೆಸ್ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಣೆ ಮಾಡಿದೆ.
ವಿಜಯ್ ನೇತೃತ್ವದ ಟಿವಿಕೆಪಕ್ಷಕ್ಕೆ ಕಾಂಗ್ರೆಸ್ ತನ್ನ ಪೂರ್ಣ ಬೆಂಬಲವನ್ನು ಘೋಷಿಸಿದ್ದು, ಚೆನ್ನೈನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ವಿಜಯ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಒಮ್ಮತದಿಂದ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿವೆ. ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಒದಗಿಸಲು ಕಾಂಗ್ರೆಸ್ ಸಿದ್ಧವಿದ್ದು, ಈ ಸಂಬಂಧ ಅಧಿಕೃತ ಮಾತುಕತೆಗಳು ಪೂರ್ಣಗೊಂಡಿವೆ.
ಇದರ ಬೆನ್ನಲ್ಲೇ ನಟ ವಿಜಯ್ ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದು, ಸರ್ಕಾರ ರಚನೆ ಹಾಗೂ ಪ್ರಮಾಣವಚನ ಸ್ವೀಕಾರಕ್ಕೆ ಸಮಯ ಕೇಳಲಿದ್ದಾರೆ. ಮಾಹಿತಿ ಪ್ರಕಾರ ನಾಳೆಯೇ ನಟ ವಿಜಯ್ ತಮಿಳುನಾಡು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಚೆನ್ನೈನಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ನಟ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ನಾಳೆಯಿಂದಲೇ ತಮಿಳುನಾಡಿನಲ್ಲಿ ವಿಜಯ್ ಸರ್ಕಾರ ಆಡಳಿತ ನಡೆಸಲಿದೆ ಎನ್ನಲಾಗಿದೆ.

