ವಿಜಯನಗರ: ಸಿವಿಲ್ ಗುತ್ತಿಗೆದಾರರೊಬ್ಬರು ಲಾಡ್ಜ್ ರೂಮ್ ನಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉದ್ಯಮಿ ಹಾಗೂ ಸಿವಿಲ್ ಗುತ್ತಿಗೆದಾರ ಉಮೇಶ್ ಹೆಗಡೆ (40) ಆತ್ಮಹತ್ಯೆಗೆ ಶರಣಾದವರು. ಹೂವಿನಹಡಗಲಿಯ ದಾಕ್ಷಾಯಿಣಿ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.
ಹುಬ್ಬಳ್ಳಿಯ ಭವಾನಿ ನಗರದ ನಿವಾಸಿಯಾಗಿರುವ ಉಮೇಶ್ ಹೆಗಡೆ ಹೂವಿನಹಡಗಲಿ ಪಟ್ಟಣದ ತಾಲೂಕು ಕ್ರೀಡಾಂಗಣ ಅಭಿವೃದ್ಧಿ ಹಾಗೂ ನವೀಕರಣ ಕಾಮಗಾರಿ ಟೆಂಡರ್ ಪಡೆದು ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದರು. ಭಾನುವಾರ ಹೂವಿನಹಡಗಲಿಗೆ ಬಂದಿದ್ದ ಉಮೇಶ್ ಹೆಗಡೆ ದಾಕ್ಷಾಯಿಣಿ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಇಂದು ಬೆಳಿಗ್ಗೆ ಪತ್ನಿ ಹಾಗೂ ಮಗ ಹಲವು ಬಾರಿ ಕರೆ ಮಾಡಿದರೂ ಉಮೇಶ್ ಹೆಗಡೆ ಫೋನ್ ರಿಸೀವ್ ಮಾಡಿಲ್ಲ. ಗಾಬರಿಯಾದ ಕುಟುಂಬ ಲಾಡ್ಜ್ ನವರಿಗೆ ಕರೆ ಮಾಡಿ ವಿಚಾರಿಸಿದೆ. ಈ ವೇಳೆ ಲಾಡ್ಜ್ ಸಿಬ್ಬಂದಿ ರೂಮಿಗೆ ಹೋಗಿ ನೋಡಿದ್ದಾರೆ. ಬಾಗಿಲು ತಟ್ಟಿದರೂ ಉಮೇಶ್ ಹೆಗಡೆ ಬಾಗಿಲು ತೆರೆದಿಲ್ಲ. ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪೊಲೀಸರು ರೂಂ ಬಾಗಿಲು ತೆರೆದು ನೋಡಿದಾಗ ಲಾಡ್ಜ್ ರೂಂಇನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಉಮೇಶ್ ಹೆಗಡೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
