ತಮಿಳು ಚಿತ್ರರಂಗದ ಸ್ಟಾರ್ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ ದಳಪತಿ ವಿಜಯ್, ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಪತ್ನಿ ಸಂಗೀತಾ ಸೊರ್ನಲಿಂಗಂ ಅವರಿಂದ ವಿಜಯ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿವೆ. ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಈ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬ ಸುದ್ದಿಗಳ ನಡುವೆಯೇ ವಿಜಯ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಮಾರ್ಚ್ 2ರಂದು ವಿಜಯ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ಪೋಸ್ಟ್‌ನಲ್ಲಿ ಅವರು ತಮ್ಮ ಸಂಸಾರಿಕ ಜೀವನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಬದಲಾಗಿ, ತಮಿಳುನಾಡು ಮತ್ತು ಪುದುಚೇರಿಯಲ್ಲಿ 12ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. “ನನ್ನ ಪ್ರೀತಿಯ ತಮ್ಮಂದಿರು ಮತ್ತು ತಂಗಿಯರೇ, ಯಾವುದೇ ಆತಂಕ ಅಥವಾ ಭಯವಿಲ್ಲದೆ ಧೈರ್ಯವಾಗಿ ಪರೀಕ್ಷೆ ಎದುರಿಸಿ. ನಾಳೆಯ ಸಮೃದ್ಧ ಸಮಾಜವನ್ನು ನಿರ್ಮಿಸುವ ಶಕ್ತಿ ನಿಮಗಿದೆ. ಜಯ ನಿಮ್ಮದಾಗಲಿ” ಎಂದು ವಿಜಯ್ ತಮಿಳಿನಲ್ಲಿ ಬರೆದುಕೊಂಡಿದ್ದಾರೆ.
ವಿಜಯ್ ಮತ್ತು ಸಂಗೀತಾ ಅವರದ್ದು ಪ್ರೇಮ ವಿವಾಹವಾಗಿತ್ತು. ‘ಲವ್ ಟುಡೇ’ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ ಈ ಜೋಡಿ, ನಂತರ ಪೋಷಕರ ಒಪ್ಪಿಗೆಯ ಮೇರೆಗೆ ಮದುವೆಯಾಗಿದ್ದರು. ಹಲವು ಸಂದರ್ಶನಗಳಲ್ಲಿ ವಿಜಯ್ ಅವರು ತಮ್ಮ ಯಶಸ್ಸಿನ ಹಿಂದೆ ಪತ್ನಿ ಸಂಗೀತಾ ಅವರ ಬೆಂಬಲ ದೊಡ್ಡದಿದೆ ಎಂದು ಹೇಳಿಕೊಂಡಿದ್ದರು. ಆದರೆ ಈಗ ಈ ದಂಪತಿಗಳ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.
ತಮ್ಮ ವೈಯಕ್ತಿಕ ಜೀವನದಲ್ಲಿ ಎಷ್ಟೇ ಏರಿಳಿತಗಳಿದ್ದರೂ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ವಿಜಯ್ ಅವರು ಹಾರೈಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿಜಯ್ ಅವರ ಈ ‘ಮೋಟಿವೇಶನಲ್’ ಪೋಸ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

